ಬೆಳಗಾವಿ : ಪರಿಷತ್ ಚುನಾವಣೆಯಲ್ಲಿ ಕಡೆಗೂ ತಮ್ಮ ಪಕ್ಷದ ಅಭ್ಯರ್ಥಿಯನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿಕೊಂಡಿದ್ದಾರೆ. ಸಹೋದರನಿಗೆ ಟಿಕೆಟ್ ಕೊಡಿಸಿದ್ದು, ದ್ವಿ ಸದಸ್ಯ ಸ್ಥಾನದಲ್ಲಿ ಚನ್ನರಾಜ್ ಹಟ್ಟಿಹೊಳಿ ಗೆಲುವಿನ ನಗೆ ಬೀರಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಕೂಡ ಗೆದ್ದಿದ್ದಾರೆ.
ಈ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಹೋದರನ ಗೆಲುವಿನಿಂದಾಗಿ ಹೊಸ ಹುಮ್ನಸ್ಸು ಹುಟ್ಟಿಕೊಂಡಿದೆ. ಇದೀಗ ಬೆಳಗಾವಿಯಲ್ಲಿ ಮತ್ತೊಂದು ಕಾಂಗ್ರೆಸ್ ಕುಟುಂಬ ಸೃಷ್ಟಿಯಾಗಿದೆ. ತುಂಬಾ ಸಂತೋಷವಾಗ್ತಿದೆ. ಕಾಂಗ್ರೆಸ್ 12 ಸೀಟು ಗೆದ್ದರು ಕೆಲವರು ಏನೇನೋ ಮಾತಾಡ್ತಾ ಇದ್ದಾರೆ. ಬರೀ ದುಡ್ಡಿನಿಂದ ಗೆಲ್ತೇವೆ ಅನ್ನೋದು ಮೂರ್ಖತನ.
ಸ್ಪರ್ಧೆ ಅಂತ ಬಂದ್ಮೇಲೆ ಎದುರಾಳಿಗಳನ್ನ ಸ್ಟ್ರಾಂಗ್ ಅಂತಾನೆ ಭಾವಿಸಬೇಕು. ಅದೇ ರೀತಿ ಭಾವಿಸಿಯೇ ಕಾರ್ಯತಂತ್ರಗಳನ್ನ ರೂಪಿಸಿದೆವು. ಅದರಂತೆಯೇ ಪ್ರಚಾರವನ್ನು ಮಾಡಿದೆವು. ಜನರು ಈಗ ಬುದ್ಧಿವಂತರಿದ್ದಾರೆ. ದುಡ್ಡಿನಿಂದ ಗೆಲುವು ಸಾಧ್ಯವಿಲ್ಲ. ಜನಪ್ರತಿನಿಧಿಗಳೇ ವೋಟ್ ಮಾಡಿದ್ರಿಂದ ಅರ್ಹ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೆಣ್ಣು ಮಗಳನ್ನ ತುಳಿಯೋಕೆ ಟ್ರೈ ಮಾಡಿದ್ರು. ಆದ್ರೆ ಅವರ ಕುಟುಂಬದವರೇ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.