ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯ ವಾಹನ ಸವಾರರು ಪ್ರಾಣ ಭಯದಲ್ಲೇ ಓಡಾಡುವ ರೀತಿ ಆಗಿದೆ. ಎಲ್ಲಿ ನೋಡಿದರೂ ಗುಂಡಿಗಳೇ. ಯಾವ ರಸ್ತೆಯಲ್ಲಿ ನೋಡಿದ್ರು ಗುಂಡಿಗಳದ್ದೇ ಕಾರು ಬಾರು. ಮಳೆ ಬಂದ್ರಂತು ಗುಂಡಿಗಳು ಎಲ್ಲಿ ಇದಾವೆ ಎಂಬುದೇ ಗೊತ್ತಾಗಲ್ಲ. ಈ ಗುಂಡಿಗಳನ್ನ ತಪ್ಪಿಸಲು ಹೋಗಿ ಅದೆಷ್ಟೋ ಜನ ಪ್ರಾಣ ಬಿಟ್ಟಿದ್ದಾರೆ. ಆದ್ರೂ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಹಾಕಿಲ್ಲ. ಈಗಾಗಿ ಇಂದು ಬಿಬಿಎಂಪಿಗೆ ತಿಥಿ ಕಾರ್ಯ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಿತ ಕಾರ್ಮಿಕರ ಒಕ್ಕೂಟ ಇಂದು ವಿನೂತನವಾಗಿ ಪ್ರತಿಭಟನೆ ನಡೆಸಿದೆ. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಈ ಪ್ರತಿಭಟನೆ ನಡೆದಿದ್ದು, ಬಿಬಿಎಂಪಿ ಫೋಟೋಗೆ ಹಾರ ಹಾಕಿ, ವಡೆ, ಪಾಯಸ ಎಡೆ ಇಟ್ಟು, ತಲೆ ಬೋಳಿಸಿಕೊಂಡಿದ್ದಾರೆ.
ಕಳೆದ ಹನ್ನೊಂದು ದಿನದ ಹಿಂದೆ ಸುಂಕದ ಕಟ್ಟೆ ರಸ್ತೆ ಗುಂಡಿಯಲ್ಲಿ ಈ ಸಂಬಂಧ ಪ್ರತಿಭಟನೆ ಮಾಡಿದ್ದರು. ಬಿಬಿಎಂಪಿ ಬ್ಯಾನರ್ ಸುಟ್ಟು ಹಾಕಿ ಹನ್ನೊಂದು ದಿನದ ಗಡುವು ನೀಡಿದ್ದರು. ಆದರೂ ಬಿಬಿಎಂಪಿ ಕ್ಯಾರೆ ಎನ್ನದ ಕಾರಣ ಇಂದು ತಿಥಿ ಕಾರ್ಯ ಮಾಡಿದ್ದಾರೆ.