ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 01 : ಕಾರ್ಮಿಕರ ಶ್ರಮವಿಲ್ಲದೆ ದೇಶ ಅಭಿವೃದ್ದಿಯಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕೃಷಿ, ಕೈಗಾರಿಕೆ, ಉದ್ಯಮ ಹೀಗೆ ಎಲ್ಲಾ ರಂಗಗಳಲ್ಲಿಯೂ ಕಾರ್ಮಿಕರು ಒಂದಲ್ಲ ಒಂದು ರೀತಿಯಲ್ಲಿ ದುಡಿಯುತ್ತಿದ್ದಾರೆ. ದಿನದ 24 ಗಂಟೆಯೂ ಕಾರ್ಮಿಕರಿಂದ ಮಾಲೀಕರು ದುಡಿಸಿಕೊಳ್ಳುತ್ತಿದ್ದುದನ್ನು ವಿರೋಧಿಸಿ ಅಮೇರಿಕಾದ ಚಿಕಾಗೋ ನಗರದಲ್ಲಿ ಕಾರ್ಮಿಕರು ಚಳುವಳಿ ಆರಂಭಿಸಿ ದಿನಕ್ಕೆ ಎಂಟು ಗಂಟೆಯಷ್ಟೆ ದುಡಿಯುತ್ತೇವೆಂಬ ಬೇಡಿಕೆಯನ್ನು ಮುಂದಿಟ್ಟರು. ಅಂದಿನಿಂದ ಇಲ್ಲಯವರೆಗೂ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೆ ಇದ್ದಾರೆಂದರು.
ಸಂವಿಧಾನ ಜಾರಿಯಾದ ಮೇಲೆ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳು ಕಾರ್ಮಿಕರ ಕುಟುಂಬಕ್ಕೆ ತಲುಪುತ್ತಿವೆ. ಮಾಲೀಕರು ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್ ಚೋಟು ಮಾತನಾಡಿ ರೈತರು ಹೇಗೆ ದೇಶದ ಬೆನ್ನೆಲುಬೋ ಅದೇ ರೀತಿ ಕಾರ್ಮಿಕರು ಕೂಡ ದೇಶದ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ. ದೇಶ ಕಟ್ಟುವಲ್ಲಿ ಕಾರ್ಮಿಕರ ಶ್ರಮವಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಸೌಲಭ್ಯಗಳನ್ನು ಕಸಿದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಮಿಕರ ಪರವಾಗಿದ್ದಾರೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡುತ್ತ ಪ್ರಜಾಪ್ರಭುತ್ವದಲ್ಲಿ ಕಾರ್ಮಿಕ ದಿನಾಚರಣೆಯನ್ನು ಪ್ರತಿ ವರ್ಷ ಮೇ.1 ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಿ ಅದರ ಮೂಲಕ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಕಾರ್ಮಿಕರಿಗೆ ಮತ್ತು ಮಕ್ಕಳ ಶಿಕ್ಷಣ, ವಿವಾಹಕ್ಕೆ ಹಣದ ನೆರವು ಕೊಡುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಸೈಯದ್ ಅಫಾಖ್ ಅಹಮದ್ ಮಾತನಾಡಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳು ಇನ್ನು ದೊರೆತಿಲ್ಲ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ, ಪ್ರಕಾಶ್‍ರಾಮನಾಯ್ಕ, ಫರಾನ್, ಅಬ್ದುಲ್ ರೆಹಮಾನ್, ಚಾಂದ್‍ಪೀರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್. ಡಿ.ಕುಮಾರ್, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಇನ್ನು ಅನೇಕರು ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ : ಕಾರ್ಮಿಕ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಲ್ಲಿ ಬುಧವಾರ ಸಿಹಿ ವಿತರಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್‍ರವರ ಜಯಂತಿ ಆಚರಿಸಲಾಯಿತು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಕಳೆದ ಹದಿನಾರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದೆ.
ಕಾರ್ಮಿಕರು ಮತ್ತು ಮಕ್ಕಳ ಶಿಕ್ಷಣ ಹಾಗೂ ವಿವಾಹಕ್ಕೆ ಪ್ರೋತ್ಸಾಹ ಧನ ಸಿಗುತ್ತಿಲ್ಲ. ನೊಂದಣಿ ಕಾರ್ಡ್ ನೀಡದೆ ವಿಳಂಭ ನೀತಿ ಅನುಸರಿಸುತ್ತಿರುವುದರಿಂದ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲತ್ತುಗಳಿಂದ ವಂಚಿತರಾಗುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಜಾವಿದ್‍ಭಾಷ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಲಕ್ಷ್ಮಿದೇವಿ, ಎ.ನಾಗರಾಜು, ಉಪಾಧ್ಯಕ್ಷರುಗಳಾದ ಎಂ.ಮಲ್ಲಿಕಾರ್ಜುನ್, ಮನ್ಸೂರ್‍ಭಾಷ, ಆರ್.ರಮೇಶ್, ಕಾರ್ಯದರ್ಶಿ ಎಂ.ಸುರೇಶ್, ಖಜಾಂಚಿ ಟಿ.ಅಶೋಕ್, ಕಾರ್ಯಾಧ್ಯಕ್ಷ ವಿ.ಬಸವರಾಜ್, ಸಂಘಟನಾ ಕಾರ್ಯದರ್ಶಿ ಓಂಕಾರಪ್ಪ, ಹನುಮಂತಪ್ಪ, ಚಳ್ಳಕೆರಪ್ಪ, ಕಾರ್ಯದರ್ಶಿ ಪಿ.ರಾಜು, ನಾಗಭೂಷಣ್ ಸಿ.ಹೆಚ್. ಎಂ.ರಾಜು, ತಿಪ್ಪೇಸ್ವಾಮಿ ಎಂ, ಸಂಚಾಲಕ ವೀರೇಶಿ ಈ ಸಂದರ್ಭದಲ್ಲಿದ್ದರು.