ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.02) : ಚಿಕಾಗೋ ನಗರದಲ್ಲಿ ಕಾರ್ಮಿಕರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದಾಗ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ಕಾರ್ಮಿಕರ ತ್ಯಾಗ ಬಲಿದಾನಗಳನ್ನು ಸ್ಮರಿಸುವುದಕ್ಕಾಗಿ ಪ್ರತಿ ತಿಂಗಳು ಮೇ. 1 ರಂದು ವಿಶ್ವಾದ್ಯಂತ ಕಾರ್ಮಿಕ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಸಿ.ಐ.ಟಿ.ಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ 137 ನೇ ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
ಕಾರ್ಮಿಕರು ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಮಾಲೀಕರುಗಳು ವಿಧಿಸಿದ್ದ ನಿಬಂಧನೆಯನ್ನು ವಿರೋಧಿಸಿ ದಿನಕ್ಕೆ ಎಂಟು ಗಂಟೆಗಳು ಮಾತ್ರ ಕೆಲಸ ಮಾಡುವುದಾಗಿ ಕಾರ್ಮಿಕರು ಮುಷ್ಕರಕ್ಕಿಳಿದು ಪೊಲೀಸರ ಗುಂಡಿಗೆ ನೆತ್ತರು ಸುರಿಸಿದರು. ಅದಕ್ಕಾಗಿ ಹುತಾತ್ಮರಿಗೆ ಗೌರವ ಸಲ್ಲಿಸುವುದು ಕಾರ್ಮಿಕ ದಿನಾಚರಣೆ ಉದ್ದೇಶ ಎಂದು ಹೇಳಿದರು.
ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು 1996 ಪುನರ್ ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ರಕ್ಷಿಸಿ, ಕಲ್ಯಾಣ ಮಂಡಳಿಯ ಎಲ್ಲಾ ಘೋಷಿತ ಸೌಲಭ್ಯಗಳ ಜಾರಿಗಾಗಿ ಹೋರಾಟ ಮಾಡಬೇಕಿದೆ. ಕೋವಿಡ್ ಹೆಸರಿನಲ್ಲಿ ನಡೆದಿರುವ ಎಲ್ಲಾ ಬಗೆಯ ಖರೀಧಿ ತನಿಖೆಯಾಗಬೇಕು. ಕಾರ್ಮಿಕರು ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ.ಗಳನ್ನು ಕೊಡಬೇಕು. ಇಷ್ಟೆಲ್ಲಾ ಬೇಡಿಕೆಗಳು ಈಡೇರಬೇಕಾಗಿರುವುದರಿಂದ ಕಾರ್ಮಿಕರು ಮೊದಲು ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರ ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಖಜಾಂಚಿ ಉಮೇಶ್, ಮಹಿಳಾಧ್ಯಕ್ಷೆ ಸಣ್ಣಮ್ಮ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಮಲ್ಲಿಕಾರ್ಜುನ್, ಶೇಖ್ ಕಲೀಂವುಲ್ಲಾ, ಅಬ್ದುಲ್ಲಾ ವೇದಿಕೆಯಲ್ಲಿದ್ದರು.
ಹಿರಿಯ ಕಟ್ಟಡ ಕಾರ್ಮಿಕರಾದ ಸಿದ್ದಲಿಂಗಾಚಾರ್, ಚಂದ್ರಶೇಖರಾಚಾರ್, ಅನ್ವರ್‍ಸಾಬ್, ಬೋರಮ್ಮ, ಜಯಣ್ಣ, ಶಿವಲಿಂಗಮ್ಮ ಇವರುಗಳನ್ನು ಸನ್ಮಾನಿಸಲಾಯಿತು.