KPSC ಪೂರ್ವಭಾವಿ ಪರೀಕ್ಷೆ ಮುಂದೂಡಲು ಕುಮಾರಸ್ವಾಮಿ ಮನವಿ : ಕಾರಣವೇನು..?

1 Min Read

 

ಬೆಂಗಳೂರು: ಆಗಸ್ಟ್ 27ರಂದು ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗಳು ನಡೆಯಲಿವೆ. ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪರೀಕ್ಷೆಯನ್ನು ಮುಂದೂಡಿ ಎಂದು ಮನವಿ ಮಾಡಿದ್ದಾರೆ.

ಗೆಜೆಟೆಡ್ ಪ್ರೊಬೆಷನರ್ಸ್ 384 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಸಾಕಷ್ಟು ಕಡೆಯಿಂದ ಈ ಪರೀಕ್ಷೆಯನ್ನು ಮುಂದೂಡಿ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಆ ಮನವಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಧ್ವನಿಗೂಡಿಸಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿದ್ದು, ಕರ್ನಾಟಕ ಲೋಕಸೇವಾ ಆಯೋಗ (KPSC) ಈ ತಿಂಗಳ 27ರಂದು 2023-24ರ KAS ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ.

ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ KPSCಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು? ಅನೇಕ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ.

ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ನಡೆಸುತ್ತಿರುವಂತೆ ಕಾಣುತ್ತಿದೆ. 4-5 ವರ್ಷಗಳಿಂದ ಕಷ್ಟಪಟ್ಟು ಓದಿರುವವರಿಗೆ ಅನ್ಯಾಯ ಮಾಡುವ ದುರಾಸೆ ಒಳ್ಳೆಯದಲ್ಲ. @INCKarnataka ಸರಕಾರ ಹಾಗೂ #KPSC ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಎಲ್ಲಾ ಆಕಾಂಕ್ಷಿಗಳಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಿ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *