ರಾಯಚೂರು: ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಜೆಡಿಎಸ್ ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ಗೆದ್ದು ಬರುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಭವಾನಿ ರೇವಣ್ಣ ಇತ್ತಿಚೆಗೆ ನಾನೇ ಅಲ್ಲಿನ ಅಭ್ಯರ್ಥಿ ಎಂದು ಅನೌನ್ಸ್ ಮಾಡಿದ್ದರು. ಜೆಡಿಎಸ್ ನಿಂದ ಈಗಾಗಲೇ ತೀರ್ಮಾನ ಮಾಡಲಾಗಿದೆ, ಸ್ವಲ್ಪದರಲ್ಲಿಯೇ ಅನೌನ್ಸ್ ಮಾಡುತ್ತಾರೆ ಎಂದು ವೇದಿಕೆಯಲ್ಲಿ ಹೇಳಿದ್ದರು. ಅದಾದ ಮೇಲೂ ಪತಿ ರೇವಣ್ಣ ಮೂಲಕ ಟಿಕೆಟ್ ಗೆ ಒತ್ತಡ ಹೇರಿದ್ದರು.
ಈ ಬಗ್ಗೆ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಎಂಬ ಆಸೆ ಇರುತ್ತದೆ. ಆದರೆ ಭವಾನಿ ರೇವಣ್ಣ ಹಾಸನದಲ್ಲಿ ನಿಲ್ಲುವ ಅನಿವಾರ್ಯತೆ ಇಲ್ಲ. ಅನಿವಾರ್ಯ ಇದ್ದಿದ್ದರೆ ನಾನೇ ನಿಲ್ಲಿಸುತ್ತಾ ಇದ್ದೆ. ಹಾಸನ ಕ್ಷೇತ್ರಕ್ಕೆ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಅಲ್ಲಿ ಈಗ ಅನಿವಾರ್ಯತೆ ಇಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ನಿಲ್ಲಿಸಲು ಒಂದು ಕಾರಣವಿದೆ ಎಂದಿದ್ದಾರೆ.
ನನಗೆ ಕಾರ್ಯಕರ್ತರೇ ಕುಟುಂಬ ಇದ್ದ ಹಾಗೇ. ನಮ್ಮ ಕುಟುಂಬದಲ್ಲಿ ಸಂಘರ್ಷ ನಡೆಯುತ್ತಿದೆ ಅನ್ನೋದು ಏನು ಇಲ್ಲ. ಇಲ್ಲಿ ಕುಟುಂಬ ರಾಜಕಾರಣವಿಲ್ಲ. ಗೊಂದಲವಿದ್ದರೆ ಬಗೆಹರಿಸಿಕೊಳ್ಳುತ್ತೇವೆ. ಅವಶ್ಯಕತೆ ಬಿದ್ದರೆ ಕಾರ್ಯಕರ್ತರಿಗೆ ತಲೆ ಕೊಡುತ್ತೇವೆ ಎಂದಿದ್ದಾರೆ.