ಮಂಡ್ಯ: ಚುನಾವಣಾ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ಸುಮಲತಾ ಬದ್ಧ ವೈರಿಗಳೇ ಸರಿ. 2019 ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿಯ ಕಣವಾಗಿದ್ದ ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದರು. ಆದರೆ 2024ರ ಚುನಾವಣಾ ವೇಳೆಗೆ ಬಿಜೆಪಿ ಸೇರಿ ಟಿಕೆಟ್ ಇಲ್ಲದೆ ಖಾಲಿ ಕೈನಲ್ಲಿ ಕೂತರು. ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ ಗೆದ್ದು ಸಂಸದರಾಗಿದ್ದಾರೆ. ಸಂಸದರಾದವರಿಗೆ ಸರ್ಕಾರದಿಂದ ಕಾರು ಕೊಡಬೇಕಾಗಿದೆ. ಆದರೆ ಸರ್ಕಾರ ಕೊಡುವ ಕಾರನ್ನ ಕುಮಾರಸ್ವಾಮಿ ಮುಟ್ಟಿಲ್ಲ. ಯಾಕಂದ್ರೆ ಅದು ಸುಮಲತಾ ಬಳಸಿ ಬಿಟ್ಟಿರುವ ಕಾರಾಗಿದೆ.
ಈ ಸಂಬಂಧ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಈ ಹಿಂದೆ ಸುಮಲತಾ ಗೆದ್ದು ಸಂಸದರಾಗಿದ್ದರು. ಅವರಿಗೆ ಸರ್ಕಾರದಿಂದ ಕಾರನ್ನು ನೀಡಲಾಗಿತ್ತು. ಈಗ ಕುಮಾರಸ್ವಾಮಿ ಅವರು ಸಂದರಾಗಿದ್ದಾರೆ. ವಾಡಿಕೆಯಂತೆ ಈ ಹಿಂದೆ ಸಂಸದರಾಗಿದ್ದ ಕಾರನ್ನೇ ಹೊಸ ಸಂಸದರಿಗೂ ನೀಡುತ್ತಾರೆ. ಆದರೆ ಕುಮಾರಸ್ವಾಮಿ ಅವರು ಆ ಕಾರನ್ನು ನಿರಾಕರಿಸಿದ್ದಾರೆ. ಸುಮಲತಾ ಬಳಸುತ್ತಿದ್ದ ಕಾರು ನನಗೆ ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದಕ್ಕೆ ನಾವೇನು ಮಾಡಲು ಸಾಧ್ಯ..?
ಸುಮಲತಾ ಅವರು ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಅವರು ಬೇಡ ಎಂದದ್ದು ಏಕೆ ಎಂಬುದು ಗೊತ್ತಿಲ್ಲ. ನಾವೇನು ಕಾರನ್ನು ಕೊಡುವುದಿಲ್ಲ ಎಂದು ಹೇಳಿಲ್ಲ. ಆದರೆ ಕಾರು ಬೇಡ ಎಂದಿರೋದು ಅವರೆ. ನಮಗೂ ಕೂಡ ಈ ಹಿಂದಿನ ಸಚಿವರು ಬಳಸುತ್ತಿದ್ದ ಕಾರನ್ನೇ ನೀಡಿರುವುದು. ನಾನು ಅದನ್ನೇ ಬಳಸುತ್ತಿರುವುದು. ಈ ಹಿಂದೆ ನಾನು ಸಂಸದನಾದಾಗ ಅಂವರೀಶ್ ಅವರು ಬಳಸುತ್ತಿದ್ದ ಕಾರನ್ನೇ ನೀಡಿದರು. ಆಮೇಲೆ ನನಗೆ ಹೊಸ ಕಾರು ಕೊಟ್ಟದ್ದು ಎಂದಿದ್ದಾರೆ.