ಬೇಡಿಕೆ ಈಡೇರಿಸದ ಸರ್ಕಾರ : ಡಿಸೆಂಬರ್ 31 ರಂದು ಕೆ.ಎಸ್.ಆರ್.ಟಿ.ಸಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

1 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28 : ಕೆ.ಎಸ್.ಆರ್.ಟಿ.ಸಿ. ನೌಕರರ ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರ್ಕಾರ ಸತಾಯಿಸುತ್ತಿರುವುದನ್ನು ವಿರೋಧಿಸಿ ಡಿ.31 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ಟಾಫ್ ಅಂಡ್ ವರ್ಕ್ಸ್ ಯೂನಿಯನ್ ಚಿತ್ರದುರ್ಗ ವಿಭಾಗದ ಗೌರವಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‌ಬಾಬು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿರುವುದು ಸ್ವಾಗತಾರ್ಹ. ರಾಜ್ಯದ ನಾಲ್ಕು ನಿಗಮಗಳ ಚಾಲಕರು ಹಾಗೂ ನಿರ್ವಾಹಕರ ಶ್ರಮದಿಂದ ಪ್ರಯಾಣಿಕರು ಸುರಕ್ಷಿತವಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ಚರ್ಚಿಸಿ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಅಲ್ಲಿ ನಮ್ಮ ಮನವಿ ಪತ್ರವನ್ನು ಪಡೆಯಲು ಸಿ.ಎಂ.ಬರಲಿಲ್ಲ. ಅವರ ಬದಲಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ಸ್ವೀಕರಿಸಿ ಸಾರಿಗೆ ಸಚಿವರ ಗಮನ ಸೆಳೆಯುವ ಭರವಸೆ ನೀಡಿದರೆ ವಿನಃ ಇದರುವರೆವಿಗೂ ಯಾವುದೂ ಈಡೇರಿಲ್ಲದ ಕಾರಣ ನೌಕರರು ಮುಷ್ಕರಕ್ಕೆ ಮುಂದಾಗಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಕಾಂ.ಜಿ.ಸಿ.ಸುರೇಶ್‌ಬಾಬು ಮನವಿ ಮಾಡಿದರು.

ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕ್ಸ್ ಯೂನಿಯನ್ ಕಾರ್ಯಾಧ್ಯಕ್ಷ ರಹೀಂಸಾಬ್ ಮಾತನಾಡಿ 38 ತಿಂಗಳ ವೇತನ ಬಾಕಿ ಕೂಡಲೆ ಪಾವತಿಸಬೇಕು. ದಿನಾಂಕ: 1-1-2024 ರಿಂದ ವೇತನ ಪರಿಷ್ಕರಣೆ ಹಾಗೂ ನಿವೃತ್ತ ನೌಕರರಿಗೆ ದಿನಾಂಕ : 27-6-2024 ರ ಸುತ್ತೋಲೆ ಹಣವನ್ನು ಕೂಡಲೆ ಬಿಡುಗಡೆಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದಿಂದ ಯಾವುದೆ ಸ್ಪಂದನೆಯಿಲ್ಲ. ಬೊಮ್ಮಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಶೇ.15 ರಷ್ಟು ವೇತನ ಹೆಚ್ಚಳ ಮಾಡಿದ್ದನ್ನು ಇದುವರೆವಿಗೂ ನೀಡಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ. ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಸಹಕರಿಸುವಂತೆ ವಿನಂತಿಸಿದರು.

 

ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವಕರ‍್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಟಿ.ಅಶೋಕ್, ಉಪಾಧ್ಯಕ್ಷ ಟಿ.ಆರ್.ಉಮಾಪತಿ, ಸಂಘಟನಾ ಕಾರ್ಯದರ್ಶಿ ಕಾಂ.ಈ.ಸತ್ಯಮೂರ್ತಿ ಇನ್ನು ಅನೇಕರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *