ಶಿವಮೊಗ್ಗ; ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಕೆಎಸ್ಆರ್ಟಿಸಿ ಬಸ್ ಗೆ ಸರಿಯಾದ ಶಿಕ್ಷೆಯನ್ನ ಸಾಗರ ಕೋರ್ಟ್ ವಿಧಿಸಿದೆ. ಅಪಘಾತ ಮಾಡಿಯೂ ಪರಿಹಾರ ನೀಡದ ಕೆಎಸ್ಆರ್ಟಿಸಿ ಬಸ್ ಅನ್ನು ಜಪ್ತಿ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಕೋರ್ಟ್ ನಿಂದ ಬಸ್ ಜಪ್ತಿಯ ಆದೇಶ ನೀಡಿದೆ. ಅಷ್ಟಕ್ಕೂ ಅಂಥ ಘಟನೆ ಏನು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

2022ರ ಜುಲೈ 7ರಂದು ಬೆಳಗಿನ ಜಾವ ಕೆಎಸ್ಆರ್ಟಿಸಿ ಬಸ್ ನಿಂದ ಒಂದು ಅಪಘಾತ ನಡೆದಿತ್ತು. ಗಣೇಶ್ ಎಂಬಾತ ಬೆಳಗಿನ ಜಾವ ಸೈಕಲ್ ಏರಿ ಪೇಪರ್ ಹಾಕಿ, ಮನೆಗೆ ಸಹಾಯ ಮಾಡುತ್ತಿದ್ದ. ಆದರೆ ಅಂದು ಪ್ರವಾಸಿ ಮಂದಿರದ ಎದುರು ಕೆಎಸ್ಆರ್ಟಿಸಿ ಬಸ್ ಸೈಕಲ್ ಗೆ ಡಿಕ್ಕಿ ಹೊಡೆದುದರ ಪರಿಣಾಮ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಮೃತ ಗಣೇಶ್ ಪೋಷಕರು ಪರಿಹಾರಕ್ಕಾಗಿ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಂದು ಕೋರ್ಟ್ ಕೂಡ ಮೃತ ಕುಟುಂಬಕ್ಕೆ 19 ಲಕ್ಷ ಪರಿಹಾರ ನೀಡುವಂತೆ 2024ರ ಜುಲೈ 8ರಂದು ನ್ಯಾಯಾಲಯವೂ ಆದೇಶ ನೀಡಿತ್ತು. ಆದರೆ ಪರಿಹಾರ ಹಣವನ್ನು ಮಾತ್ರ ಕೆಎಸ್ಆರ್ಟಿಸಿ ಇಲ್ಲಿಯವರೆಗೂ ನೀಡಿಲ್ಲ.

ಇದರಿಂದ ನೊಂದ ಗಣೇಶನ ತಾಯಿಉಮಾ ಅವರು ನ್ಯಾಯಾಲಯಕ್ಕೆ ಅಮಲ್ಜಾರಿ ಅರ್ಜಿ ಸಲ್ಲಿಕೆ ಮಾಡಿದರು. ಈ ಅರ್ಜಿ ಸಂಬಂಧ ಕೆಎಸ್ಆರ್ಟಿಸಿ ಗೆ ಮತ್ತೆ ನೋಟೀಸ್ ಜಾರಿ ಮಾಡಲಾಯ್ತು. ಆದರೂ ಪರಿಹಾರದ ಹಣ ಮಾತ್ರ ನೀಡಲಿಲ್ಲ. ಇದೀಗ ಕೋರ್ಟ್ ಸೀರಿಯಸ್ ಆಗಿ ನಿರ್ಧಾರ ತೆಗೆದುಕೊಂಡಿದ್ದು, ಶಿರಸಿ ಡಿಪೋಗೆ ಸೇರಿದ ಬಸ್ ಅನ್ನು ಜಪ್ತಿ ಮಾಡಿ, ನ್ಯಾಯಾಲಯದ ಆವರಣದಲ್ಲಿಯೇ ನಿಲ್ಲಿಸಲಾಗಿದೆ.

