ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದೆ ಇರುವ ಕಾತಣಕ್ಕೆ ಈಶ್ವರಪ್ಪ ಬಂಡಾಯವೆದ್ದಿದ್ದಾರೆ. ಚುನಾವಣೆಗೆ ಸ್ವಾತಂತ್ರ್ಯವಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈಗಾಗಲೇ ಈಶ್ವರಪ್ಪ ಚುನಾವಣಾ ಪ್ರಚಾರದ ಕಾರ್ಯವನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಈ ಚುನಾವಣೆಯ ಸಮಯದಲ್ಲಿ ಮೋದಿ ಅವರ ಫೋಟೋ ಬಳಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ವಿರೋಧ ಕೇಳಿ ಬಂದ ಬೆನ್ನಲ್ಲೇ ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಅವರ ಫೋಟೋ ಬಳಕೆ ಮಾಡಿಕೊಂಡಿದ್ದಕ್ಕೆ ಬಿವೈ ರಾಘವೇಂದ್ರ ಅವರು ವ್ಯಂಗ್ಯವಾಡಿದ್ದರು. ರಾಘವೇಂದ್ರಗೆ ತಿರುಗೇಟು ನೀಡಿದ್ದ ಈಶ್ವರಪ್ಪ ಅವರು, ಮೋದಿ ಏನು ಅವರಪ್ಪನ ಮನೆಯ ಆಸ್ತಿನಾ ಎಂದು ಕಿಡಿಕಾರಿದ್ದಾರೆ. ಇದೇ ವಿಚಾರಕ್ಕೆ ಶಿವಮೊಗ್ಗ ಕೋರ್ಟ್ ನಲ್ಲಿ ಕೆವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆಯಿಂದಾನೇ ಈಶ್ವರಪ್ಪ ಕಾಯುತ್ತಿದ್ದರು. ಆದರೆ ಹಾವೇರಿ ಟಿಕೆಟ್ ಬಸವರಾಜ್ ಬೊಮ್ಮಾಯಿ ಅವರಿಗೆ ಹೋಗಿತ್ತು. ಇದಾದ ಬಳಿಕ ಬಂಡಾಯವೆದ್ದಿದ್ದರು. ಬಂಡಾಯ ಶಮನ ಮಾಡುವುದಕ್ಕೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದರು. ದೆಹಲಿಗೆ ಆಹ್ವಾನ ಕೊಟ್ಟು ಹೋಗಿದ್ದರು. ಅದರಂತೆ ಈಶ್ವರಪ್ಪ ಅವರು ದೆಹಲಿಗೂ ಹೋಗಿದ್ದರು. ಅಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಲಿಲ್ಲ. ದೆಹಲಿಯಿಂದಾನೇ ಮತ್ತೆ ಬಂಡಾಯದ ಸ್ಪರ್ಧೆ ಘೋಷಣೆ ಮಾಡಿದ್ದರು. ಈಗಾಗಲೇ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದು, ಮೋದಿ ಫೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.