ಶಿವಮೊಗ್ಗ: ಗುತ್ತುಗೆದಾರ ಸಂತೋಷ್ ಪಾಟೀಲ್ ಸಾವಿನ ಎ1 ಆರೋಪಿಯಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನಾಳೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ನಿನ್ನವೆರೆಗೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ಹೇಳಿದ್ದರು. ಆದ್ರೆ ಈ ಬಗ್ಗೆ ಮಾತನಾಡಿದ ಈಶ್ವರಪ್ಪ ಇವತ್ತು ಬೇರೆ ರೀತಿಯೇ ಹೇಳಿದ್ದಾರೆ. ಮೊನ್ನೆಯೇ ಈ ಬಗ್ಗೆ ತೀರ್ಮಾನ ಮಾಡಿದ್ದೆ. ಆದರೆ ಪಕ್ಷದಲ್ಲಿ ಈ ಬಗ್ಗೆ ಬೇಡ ಎಂದಿದ್ದರು. ಹೀಗಾಗಿ ತೀರ್ಮಾನ ಹೇಳಿರಲಿಲ್ಲ ಎಂದಿದ್ದಾರೆ.
ಈಶ್ವರಪ್ಪ ರಾಜೀನಾಮೆ ನೀಡಲೇಬೇಕೆಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪ ಪರ ನಿಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ, ಇಂದು ವಿಧಾನಸೌಧದ ಮುಂದೆ ಧರಣಿ ಕುಳಿತಿದ್ದರು. ಇದೀಗ ಸಡನ್ ಆಗಿ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.