ಬೆಂಗಳೂರು: ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ ಶಿವಕುಮಾರ್ ಹೇಳಿದರು. ಈ ವೇಳೆ ಮಾತನಾಡಿದ ಅವರು, ಗಾಂಧೀಜಿ ಅವರು ರೈತರಿಗಾಗಿ ಭಾರತದಲ್ಲಿ ತಮ್ಮ ಹೋರಾಟ ಆರಂಭಿಸಿದ್ದರು. ಆದರೆ ದೇಶದ ಅನ್ನದಾತ ಕಳೆದ 10 ತಿಂಗಳಿಂದ ಗಾಂಧಿ ಆದರ್ಶವಾದ ಅಹಿಂಸೆ ಮೂಲಕ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಅವರು ಅವರ ಕಷ್ಟ ಕೇಳುವ ಮನಸ್ಸು ಮಾಡಿಲ್ಲಎಂದು ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಕುಮಾರ್ ಅವರು ಉಭಯ ನಾಯಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
ನಾವೆಲ್ಲರೂ ಇಂದು ಗಾಂಧೀಜಿ ಹಾಗೂ ಶಾಸ್ತ್ರಿ ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಜೀವನದ ಹಾದಿಯೇ ನಮ್ಮ ಬದುಕಿಗೆ ಉತ್ತರ. ಈ ಇಬ್ಬರು ಮಹಾನ್ ನಾಯಕರ ಜೀವನ ಹಾದಿ ನಮ್ಮ ಶಕ್ತಿ. ಗಾಂಧೀಜಿ ಅವರಿಗೂ ಕರ್ನಾಟಕಕ್ಕೂ ದೊಡ್ಡ ಸಂಬಂಧ ಇದೆ. ಗಾಂಧಿಜಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂತಹ ಮಹಾನ್ ನಾಯಕರು ಇದ್ದ ಪಕ್ಷದ ಸದಸ್ಯರಾಗಿ ನಾವಿಲ್ಲಿ ಕೂತಿದ್ದೇವೆ. ಇದು ನಮ್ಮ ಸೌಭಾಗ್ಯ ಅಲ್ಲವೇ? ನಮ್ಮ ಪಕ್ಷಕ್ಕಿರುವ ಹಿನ್ನೆಲೆ, ಇತಿಹಾಸವನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಬೇರೆ ಪಕ್ಷದವರಿಗೆ ಸಾಧ್ಯವೇ? ಗಾಂಧೀಜಿ ಅವರ ತ್ಯಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಬದುಕಿನ ಬಗ್ಗೆ ಬೇರೆ ಪಕ್ಷದ ನಾಯಕರು ಹೇಳಿಕೊಳ್ಳಲು ಸಾಧ್ಯವೇ?
ನಮಗೆ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ನಾವು ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳುವುದೇ ಒಂದು ಹೆಮ್ಮೆ. ಕಾಂಗ್ರೆಸ್ ಸದಸ್ಯತ್ವವೇ ನಮಗೆ ಪವಿತ್ರ ಸ್ಥಾನ. ಹೀಗಾಗಿ ನಮ್ಮ ಹಿರಿಯರ ಮಾರ್ಗದರ್ಶನವನ್ನು ನಾವು ಪಾಲಿಸಬೇಕು.
ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಲಾಗಿದ್ದು, ಡಿಸೆಂಬರ್ 28ರ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಇದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರೂ ಚರ್ಚಿಸುತ್ತೇವೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸ್ಮರಣಾರ್ಥ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಎಲ್ಲ ನಾಯಕರು 6000 ಪಂಚಾಯ್ತಿ, 1800 ವಾರ್ಡ್ ಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಇತಿಹಾಸ ಹಾಗೂ ಹೋರಾಟದ ಹಾದಿ ಸ್ಮರಿಸಲಾಗುತ್ತದೆ. ಗ್ರಾಮ ಸ್ವರಾಜ್ಯ ಗಾಂಧಿ ಅವರ ಕನಸು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಈ ತಿಂಗಳ ಒಳಗಾಗಿ ಕೆಪಿಸಿಸಿ ಸಮಿತಿ ಪುನಾರಚನೆಯಾಗಲಿದೆ. ಕೆಪಿಸಿಸಿ ಸಮಿತಿ ಜತೆಗೆ ಮತ್ತೊಂದು ಸಮಿತಿ ರೂಪಿಸಲು ರಾಷ್ಟ್ರ ನಾಯಕರು ತೀರ್ಮಾನಿಸಿದ್ದು, ಕಾಂಗ್ರೆಸ್ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ಈ ಸಮಿತಿಯನ್ನು ರೂಪಿಸಲಾಗುತ್ತಿದೆ. ಹೀಗಾಗಿ ಪ್ರತಿ ಕಾರ್ಯಕರ್ತ ಪಕ್ಷದ ಕಾರ್ಯಕ್ರಮದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು, ಪಕ್ಷ ಸಂಘಟನೆ ಮಾಡಬೇಕು ಎಂದರು.