ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಅಭಿಯಾನವನ್ನು ಆಯೋಜನೆ ಮಾಡಲಾಗಿತ್ತು. ಇದಕ್ಕೆ ರಾಜ್ಯದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಮೊದಲಿಗೆ ನಾಡಗೀತೆಯೊಂದಿಗೆ ಆರಂಭವಾಯಿತು. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಗಾಯನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಜಗ್ಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಮುಂತಾದವರು ಧ್ವನಿಗೂಡಿಸಿದರು.
ಇನ್ನು ಉಡುಪಿಯ ಮಲ್ಪೆ ಬೀಚ್ನಲ್ಲಿ ಚಲಿಸುತ್ತಿದ್ದ ಬೋಟುಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆದಿದೆ. ಮೀನುಗಾರರು ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದರೆ, ಬೋಟ್ ಒಳಗಿದ್ದ ಸಾವಿರಾರು ಮಂದಿ ಕನ್ನಡ ಗೀತೆಗಳನ್ನು ಹಾಡಿದ್ದಾರೆ.
ಇನ್ನು ಬೆಳಗಾವಿಯ ಸುವರ್ಣಸೌಧದಲ್ಲೂ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆದಿದ್ದು, ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಗಾಯನ ಮೊಳಗಿದೆ. ಅವರ ಧ್ವನಿಗೆ ನೆರೆದಿದ್ದ ಸಾವಿರಾರು ಜನ ಧ್ವನಿಗೂಡಿಸಿದರು. ಮಕ್ಕಳು, ಅಧಿಕಾರಿಗಳು ಕೂಡ ಗಾಯನಕ್ಕೆ ತಲೆದೂಗಿದರು.
ಮೈಸೂರಿನ ಅರಮನೆ ಆವರಣದಲ್ಲಿ ಕೋಟಿ ಕಂಠದ ಗಾಯನ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಜನರು, ಅಧಿಕಾರಿಗಳು, ಶಾಸಕರು, ಸಂಸದರು, ವಿದ್ಯಾರ್ಥಿಗಳು ಕೋಟಿ ಕಂಠದ ಗಾಯನದೊಂದಿಗೆ ಕನ್ನಡ ರಾಜ್ಯೋತ್ಸವಕ್ಕೆ ಮೆರಗು ತಂದಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲೂ ಕೋಟಿ ಕಂಠದ ಗಾಯನ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಒಂದೇ ಸಮಯಕ್ಕೆ ಎಲ್ಲರೂ ನಾಡಗೀತೆ ಹಾಡಿದ್ದು, ಅದ್ಭುತ ಮೆರಗು ತಂದಿತ್ತು.
ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಕೋಟಿ ಕಂಠದ ಗಾಯನ ನಡೆದಿದೆ. ಚಿಕ್ಕಮಗಳೂರಿನ ಆಟದ ಮೈದಾನದಲ್ಲಿ ಸಾವಿರಾರು ಮಕ್ಕಳ ನೇತೃತ್ವದಲ್ಲಿ ಕೋಟಿ ಕಂಠದ ಗಾಯನ ನಡೆದಿದೆ. ಹೀಗೆ ಇಡೀ ರಾಜ್ಯಾದ್ಯಂತ ಆರು ಗೀತೆಗಳನ್ನು ಏಕಕಾಲದಲ್ಲಿ ಹಾಡಿದ್ದಾರೆ.