ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.26 : ದುಗ್ಗಾವರ ಗ್ರಾಮದ ಕೋಟೆಕಲ್ಲು ರಂಗನಾಥಸ್ವಾಮಿ ದೇವರ ಪೂಜಾರಿಕೆಯನ್ನು ಪೂರ್ವದ ಮೈಸೂರು ಮಹಾರಾಜದ ಕಾಲದಿಂದಲೂ ಮುನ್ನಡೆಸಿಕೊಂಡು ಬರುತ್ತಿದ್ದು, ಪೂರ್ವಜರು ಉಳುಮೆ ಮಾಡುತ್ತಿದ್ದ ದೇವರ ಜಮೀನನ್ನು ಇಂದಿಗೂ ಅನುಭವಿಸಿಕೊಂಡು ಬರುತ್ತಿರುವುದಕ್ಕೆ ದುಗ್ಗಾವರ ಗ್ರಾಮದ ಕೆಲವು ಪ್ರಭಾವಿಗಳು ನಮಗೆ ಹಿಂಸೆ ಕಿರುಕುಳ ನೀಡುತ್ತಿರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ದುಗ್ಗಾವರ ಗ್ರಾಮದ ಪೂಜಾರ್ ವಂಶದ ಶ್ರೀಮತಿ ಇ.ವೀಣ ಮತ್ತು ಕುಟುಂಬದವರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸರ್ವೆ ನಂ.17 ವಿಸ್ತೀರ್ಣ 9 ಎಕರೆ 12 ಗುಂಟೆ ಜಮೀನನ್ನು ಪೂಜಾರಿಕೆ ಮಾಡಿ ಅನುಭವಿಸಿಕೊಂಡು ಬರುತ್ತಿದ್ದೇವೆ. ನಮ್ಮ ಅಜ್ಜಂದಿರ ನಿಧನದ ನಂತರ ಸಣ್ಣ ಅಜ್ಜ ಪೂಜಾರಿ ರಂಗಪ್ಪನ ಹೆಸರಿಗೆ ಟೆನೆನ್ಸಿ ಕಾಯಿದೆಯಡಿಯಲ್ಲಿ 1980 ರಲ್ಲಿ ಸರ್ಕಾರದಿಂದ ಆದೇಶವಾಗಿರುವುದರಿಂದ ಸದರಿ ಜಮೀನಿನಲ್ಲೆ ಮನೆ ಕಟ್ಟಿಕೊಂಡು ಅಡಿಕೆ ತೆಂಗು ಬೆಳೆಯುತ್ತ ರಂಗನಾಥಸ್ವಾಮಿ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಸಣ್ಣ ಅಜ್ಜ ರಂಗಪ್ಪ ತೀರಿದ ಮೇಲೆ ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಕೆಲವು ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆಂದು ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದ ಶ್ರೀಮತಿ ಇ.ವೀಣ ದುಗ್ಗಾವರ ಗ್ರಾಮದ ಜಿ.ಆರ್.ಪರಮೇಶ್ವರಪ್ಪ, ಡಿ.ಕೆ.ರುದ್ರಸ್ವಾಮಿ, ಬಿ.ಎನ್.ಮಂಜುನಾಥ್, ಬಿ.ಎಲ್.ಜಯಪ್ಪ, ಹೆಚ್.ಕೆ.ದ್ಯಾಮಪ್ಪ, ಅಶೋಕಪ್ಪ, ಪಿ.ಟಿ.ರಂಗಪ್ಪ, ಶಿವಕುಮಾರ್, ಹೆಚ್.ಎಸ್.ರಂಗಸ್ವಾಮಿ, ಓಂಕಾರಪ್ಪ, ಮಹೇಶ, ಡಿ.ಆರ್.ತಿಪ್ಪೇಸ್ವಾಮಿ, ಅರಳಿ ನಾಗರಾಜ್, ಮಂಜು, ರಮೇಶ, ಇವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನನ್ನ ಗಂಡ ತಿಮ್ಮೇಶಿ, ಮಾವ ಶಿವರುದ್ರಪ್ಪ, ಮೈದುನ ತೀರ್ಥಪ್ರಸನ್ನ ಇವರುಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಶಿವರುದ್ರಪ್ಪ, ಜಯಣ್ಣ, ದಿನೇಶ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.