ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಜ.10) : ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಜಾರಿಗಾಗಿ ಕಳೆದ 25-30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಸಂಕ್ರಾಂತಿಯೊಳಗೆ ಒಳಮೀಸಲಾತಿಯನ್ನು ಘೋಷಿಸದಿದ್ದರೆ ಕೋರೆಗಾಂವ್ ಯುದ್ದದ ರೀತಿಯಲ್ಲಿ ಚಳುವಳಿ ನಡೆಸಲಾಗುವುದೆಂದು ಐಮಂಗಲ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಸತ್ಯಾಗ್ರಹ, ಚಳುವಳಿ, ಅರೆಬೆತ್ತಲೆ ಮೆರವಣಿಗೆ ಹೀಗೆ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು. ಸರ್ಕಾರ ಸೊಪ್ಪು ಹಾಕುತ್ತಿಲ್ಲ.
ಶೇ.ಮೂರರಷ್ಟಿರುವವರು ಯಾವುದೇ ಮನವಿ ನೀಡಿಲ್ಲ. ಹೋರಾಟ ಮಾಡದಿದ್ದರೂ ಶೇ.10 ಮೀಸಲಾತಿಯನ್ನು ಕೇಂದ್ರ ಸರ್ಕಾರ ನೀಡಿದೆ. ವಕ್ಕಲಿಗರಿಗೆ ಮೀಸಲಾತಿ ಘೋಷಿಸಿದೆ. ಪಂಚಮಸಾಲಿಗಳಿಗೂ ಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಡಿವಾಳ ಜನಾಂಗವನ್ನು ಎಸ್ಟಿ.ಗೆ ಸೇರಿಸುವ ಭರವಸೆ ನೀಡಿದ್ದಾರೆ.
ಮಾದಿಗರ ಒಳ ಮೀಸಲಾತಿ ವಿಷಯ ಬಂದಾಗ ಸದನದಲ್ಲಿ ಧ್ವನಿಯೆತ್ತಲು ಯಾವೊಬ್ಬ ಸಚಿವನಿಗೂ ದಮ್ಮಿಲ್ಲ ಎಂದು ಖಾರವಾಗಿ ನುಡಿದರು.
ಸುಮ್ಮನೆ ಆಸೆ ತೋರಿಸಿಕೊಂಡು ಹೋಗುವ ಬದಲು ಒಳಮೀಸಲಾತಿ ನೀಡಲು ಆಗುತ್ತೋ ಇಲ್ಲವೋ ಎನ್ನುವುದನ್ನು ಸರ್ಕಾರ ಸ್ಪಷ್ಠವಾಗಿ ಹೇಳಲಿ. ಮುಂದೆ ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ.
ಪ್ರಣಾಳಿಕೆಯಲ್ಲಿ ಘೋಷಿಸಿ ಆಚರಣೆಗೆ ತರದಿರುವ ಪಕ್ಷಗಳನ್ನು ನಿಷೇಧಿಸಬೇಕು. ಇದುವರೆವಿಗೂ ಅಧಿಕಾರ ಚಲಾಯಿಸಿದ ಒಬ್ಬ ಮುಖ್ಯಮಂತ್ರಿ ಕೂಡ ನಮ್ಮ ಬಳಿ ಬಂದು ಮನವಿ ಸ್ವೀಕರಿಸಿಲ್ಲದಿರುವುದು ನೋವಿನ ಸಂಗತಿ. ಸಕ್ರಾಂತಿ, ಫೆಬ್ರವರಿ ಎಂದು ದಿನಗಳನ್ನು ಮುಂದೂಡಿದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ. ಭೋವಿ ಲಂಬಾಣಿ ಜನಾಂಗದವರು ಸದಾಶಿವ ಆಯೋಗದ ವರದಿ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಕೈಗೆ ವರದಿ ಸಿಕ್ಕಿದ್ದಾದರೂ ಹೇಗೆ ಎನ್ನುವುದು ಯಕ್ಷ ಪ್ರಶ್ನೆ? ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ. ಭೋವಿ, ಲಂಬಾಣಿಗರಿಗೆ ಹೆದರಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದಿದ್ದರೆ ಮುಂದೆ ಪರಿಣಾಮವನ್ನು ಹೆದುರಿಸಬೇಕಾಗುತ್ತದೆ. ಸಮಾಜ ಸಮಾಜದ ನಡುವೆ ತಿಕ್ಕಾಟವಿಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹರಳಯ್ಯ ಸ್ವಾಮೀಜಿ ಮನವಿ ಮಾಡಿದರು.
ದಲಿತ ಮುಖಂಡ ಬಿ.ರಾಜಪ್ಪ, ದಯಾನಂದ್, ಕುಂಚಿಗನಹಾಳ್ ಮಹಾಲಿಂಗಪ್ಪ, ಹನುಮಂತಪ್ಪ ದುರ್ಗ, ರಾಜಣ್ಣ, ಬಿಎಸ್‍ಪಿ.ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿದ್ದರು.