ಕೊಪ್ಪಳ: ಸಿಎಂ ಉಸ್ತುವಾರಿಗಳನ್ನ ಆಯ್ಕೆ ಮಾಡಿದ ಬಳಿಕ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಇಂದು ಗಣರಾಜ್ಯೋತ್ಸವವನ್ನ ಆಚರಣೆ ಮಾಡಿದ್ದಾರೆ. ಧ್ವಜಾರೋಹಣ ಮಾಡಿ, ಸಂಭ್ರಮಿಸಿದ್ದಾರೆ. ಕೊಪದ ನೂತನ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್ ಅವರು ಕೂಡ ಇಂದು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕೊಪ್ಪಳದ ಜನತೆಯೇನೋ ಸಂತಸದಲ್ಲಿದ್ದಾರೆ. ಆದ್ರೆ ನನ್ನ ವಿಜಯನಗರದ ಜನತೆ ದುಃಖದಲ್ಲಿದ್ದಾರೆ. ಒಂದು ಸಂತಸ ಅಂದ್ರೆ ನಮ್ಮ ಜನರುಗೆ ಪಕ್ಕದಲ್ಲೆ ಇದ್ದೀನಿ ಅನ್ನೋದು ಎಂದಿದ್ದಾರೆ.
ಬಹಳಷ್ಟು ಜನರಲ್ಲಿ ಉಸ್ತುವಾರಿ ಬದಲಾವಣೆ ಪ್ರಶ್ನೆ ಇದ್ದು, ನಮ್ಮಲ್ಲೂ ಈ ಬಗ್ಗೆ ಪ್ರಶ್ನೆ ಇದೆ. ತವರು ಜಿಲ್ಲೆ ಉಸ್ತುವಾರಿಗಳನ್ನು ಬೇರೆ ಬೇರೆ ಜಿಲ್ಲೆಗೆ ಹಾಕಿದ್ದು, ಇದು ನನ್ನ ರಾಜಕೀಯ ಜೀವನದ ಅನುಭವದಲ್ಲೇ ಮೊದಲು. ಈ ಹಿಂದೆ ನಾನು ನನಗೆ ಮಂತ್ರಿ ಬೇಡ ಜಿಲ್ಲೆ ಕೊಡಿ ಅಂತ ಯಡಿಯೂರಪ್ಪ ಬಳಿ ನಾನು ಕೇಳಿದ್ದೆ. ಯಡಿಯೂರಪ್ಪ ಬಹಳ ಬೇಗ ಆವೇಶಕ್ಕೆ ಬಂದು ಬಿಡುತ್ತಾರೆ. ನಾನು ಧೈರ್ಯ ಮಾಡಿ ವಿಜಯನಗರ ಜಿಲ್ಲೆ ಮಾಡಿಕೊಡಿ ಎಂದು ಕೇಳಿದ್ದೆ. ಸಿಟ್ಟಿನಿಂದ ಯಡಿಯೂರಪ್ಪ ಮಾಡುತ್ತೇವೆ ನಿಲ್ಲಿ ಅಂತ ಗದರಿದ್ದರು ಎಂದು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಪಟ್ಟ ಶ್ರಮವನ್ನ ನೆನೆದಿದ್ದಾರೆ.