ಕೊಪ್ಪಳ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಜೊತೆಗೆ ಒಮಿಕ್ರಾನ್ ಭೀತಿಯೂ ಮನೆ ಮಾಡಿದೆ. ಈ ಮಧ್ಯೆ ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್ ಕೂಡ ಜಾರಿಯಲ್ಲಿದೆ. ಸಭೆ, ಸಮಾರಂಭ ಜಾತ್ರಾ ಮಹೋತ್ಸವಕ್ಕೆ ಅನುಮತಿ ಇಲ್ಲ. ಈ ಬೆನ್ನಲ್ಲೇ ಜಿಲ್ಲೆಯ ಗವಿಸಿದ್ದೇಶ್ವರ ಜಾತ್ರೆಯೂ ರದ್ದಾಗಿದೆ.
ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಗಳಿಸಿದೆ. ಈ ಬಾರಿ ಜಾತ್ರೆಯನ್ನ ಅದ್ಧೂರಿಯಾಗಿಯೇ ಮಾಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದ್ರೆ ಕೊರೊನಾ ಹೆಚ್ಚಳದ ಆತಂಕದಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದು, ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಬ್ರೇಕ್ ಹಾಕಿದೆ.
ಆದ್ರೆ ಸಂಪ್ರದಾಯವನ್ನ ಮುರಿಯಬಾರದೆಂಬ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಶಾಸ್ತ್ರೋಕ್ತವಾಗಿ ಜಾತ್ರೆಯನ್ನ ಮಾಡಲಿದ್ದಾರೆ. ಸರಳವಾಗಿ ಜಾತ್ರೆ ನಡೆಯಲಿದ್ದು, ಹೆಚ್ಚು ಭಕ್ತಾಧಿಗಳು ಬಾರದಂತೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲ ಗದ್ದುಗೆಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ಮಹಾರಥೋತ್ಸವವನ್ನ ಮಾಡದೆ ಇರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟ ಆದೇಶ ಹೊರಡಿಸಿದೆ. ಈ ಬಾರಿಯಾದರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಬಹುದು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ.