ಚಿತ್ರದುರ್ಗ : ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೂನ್ 4 ರಂದು ಹಿರಿಯೂರು ಮತ್ತು ಹೊಸದುರ್ಗಕ್ಕೆ ಆಗಮಿಸುತ್ತಿರುವುದರಿಂದ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಗುರುವಾರ ಕರೆದಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಕಡೆಯವರು ಇದ್ದುದನ್ನು ಗಮನಿಸಿದ ಕರ್ನಾಟಕ ರಾಜ್ಯ ರೈತ ಸಂಘದವರು ಸಭೆಯನ್ನು ಬಹಿಷ್ಕರಿಸಿ ಹೊರ ಬಂದ ಪ್ರಸಂಗ ನಡೆಯಿತು.
ನಿಮ್ಮ ಬೇಡಿಕೆಗಳೇನಾದರೂ ಇದ್ದರೆ ನೇರವಾಗಿ ನಮಗೆ ಕೊಡಿ ಸರ್ಕಾರಕ್ಕೆ ಕಳಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಗೆ ತಿಳಿಸಿದಾಗ ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಿರುವುದರಿಂದ ನಾವೇ ನೇರವಾಗಿ ಕಂಡು ನಮ್ಮ ಅಹವಾಲು ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ.
ಅವಕಾಶ ಕೊಡಿ ಎಂದು ಮನವಿ ಮಾಡಿದ್ದಕ್ಕೆ ಕಾಲಾವಕಾಶ ಕಡಿಮೆಯಿರುವುದರಿಂದ ಮುಖ್ಯಮಂತ್ರಿಗಳನ್ನು ನೇರವಾಗಿ ನೀವುಗಳು ಭೇಟಿ ಮಾಡಲು ಆಗುವುದಿಲ್ಲ ಎಂದು ಉತ್ತರಿಸಿದಾಗ ಅಸಮಾಧಾನಗೊಂಡ ರೈತರು ಅವ್ಯವಹಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಕಡೆಯವರಾದ ರೆಡ್ಡಿಹಳ್ಳಿ ವೀರಣ್ಣ, ನಾಗರಾಜ್ ಇವರುಗಳ ಜೊತೆ ನಾವುಗಳು ಸಭೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಜಿಲ್ಲಾಧಿಕಾರಿಗೆ ನಿಷ್ಟೂರವಾಗಿ ಹೇಳಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಇವರುಗಳು ನಾಜೂಕಾಗಿ ಸಭೆಯಿಂದ ಹೊರಟರು.
ಹೊರಕೇರಪ್ಪ, ಧನಂಜಯ ಹಂಪಯ್ಯನಮಾಳಿಗೆ, ಕುರುಬರಹಳ್ಳಿ ಶಿವಣ್ಣ, ಹಿರಿಯೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿವಕುಮಾರ್, ಲಕ್ಷ್ಮಿಕಾಂತ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.