ಚಿತ್ರದುರ್ಗ(ಸೆ.06) : ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಾ ಬಂದಿರುವ ವಿನಾಯಕ ಮಹೋತ್ಸವವು ಇಂದಿಗೂ ಸಹಾ ಪ್ರಸ್ತುತವಾಗಿದ್ದು, ಗಣಪತಿ ಪೂಜೆಯಿಂದ ಜ್ಞಾನ, ಮೌಲ್ಯ ಮತ್ತು ಸಂಸ್ಕಾರ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 65ನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆ ಭಾಗವಹಿಸಿ ಮಾತನಾಡಿದ ಅವರು, ಗಣಪತಿ ಪೂಜೆಯ ನಂತರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದರಿಂದ ದಿನದಿಂದ ದಿನಕ್ಕೆ ವಿನಾಯಕನ ಪೂಜಾ ಕಾರ್ಯಕ್ರಮ ಹೆಚ್ಚಾಗುತ್ತಿದೆ. ಕೋವಿಡ್ ನಂತರ ಈ ವರ್ಷ ಎಂದಿಗಿಂತ ಹೆಚ್ಚಾಗಿ ವಿನಾಯಕನ ಪ್ರತಿಷ್ಠಾಪನೆಗಳು ಹೆಚ್ಚಾಗಿದೆ. ಎಂದ ಅವರು ಚಿತ್ರದುರ್ಗ ಜಿಲ್ಲೆಯ ಜನತೆ ಪ್ರಜ್ಞಾವಂತ ಮತದಾರರು ನನ್ನನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಸೇವೆಯನ್ನು ಮಾಡಲು ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬಾಲ ಗಂಗಾಧರ ತಿಲಕ್ ರವರು ಗಣಪತಿಯ ಪೂಜೆಯನ್ನು ಮಾಡುವುದರ ಮೂಲಕ ಎಲ್ಲಾ ಧರ್ಮದವರನ್ನು ಜಾತಿಯವರನ್ನು ಒಂದುಗೂಡಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿದರು. ಇದು ಇಂದಿಗೂ ಸಹಾ ನಡೆಯುತ್ತಾ ಬಂದಿದೆ. ಅಂದು ಒಂದು ಕಡೆಯಲ್ಲಿ ಮಾತ್ರ ನಡೆಯುತ್ತಿತ್ತು ಆದರೆ ಇಂದು ನಾನಾ ಕಡೆಯಲ್ಲಿ ವಿನಾಯಕನ ಪ್ರತಿಷ್ಠಾಪನೆ ನಡೆದು ಪೂಜೆಗಳು ನಡೆಯುತ್ತಿವೆ. ನಮ್ಮ ಕಾಲದಲ್ಲಿ ವಿನಾಯಕನಿಗೆ ಪೂಜೆಯನ್ನು ಮಾಡಿ ಈ ಬಾರಿ ನಾನು ಪಾಸಾಗುವಂತೆ ಮಾಡು ಎಂದು ಬೇಡುತ್ತಿದ್ದೇವೆ. ಇಂದಿನ ದಿನದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆಯಾಗುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿಯ ಕಾರ್ಯಾಧ್ಯಕ್ಷರಾದ ಗೋಪಾಲ್ ರಾವ್ ಜಾಧವ್, ಉಪಾಧ್ಯಕ್ಷರಾದ ರಾಜಕುಮಾರ್, ನಾಗರಾಜ್ ಬೇದ್ರೇ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಹ ಕಾರ್ಯದರ್ಶಿ ನಾರಾಯಣರಾವ್ ಉಪಸ್ಥಿತರಿದ್ದರು.