ಕುತಂತ್ರ ಹೆಜ್ಜೆಗಳು, ಬ್ರೂಟಸ್‌ ಪಾಲಿಟಿಕ್ಸ್‌ ಬಗ್ಗೆ ಗೊತ್ತಿದೆ: ಹೆಚ್ಡಿಕೆ

suddionenews
2 Min Read

ಬೆಂಗಳೂರು: ಸಮ್ಮನಿದ್ದರೂ ಕಾಲು ಕೆರೆದುಕೊಂಡು ಪದೇಪದೆ ತಮ್ಮ ಹಾಗೂ ಜೆಡಿಎಸ್‌ ವಿರುದ್ಧ ಟೀಕೆ ಮಾಡುತ್ತಿರುವ ಹಾಗೂ ಮಂಡ್ಯದಲ್ಲಿ ಜೆಡಿಎಸ್‌ ದುರ್ಬಲವಾಗುತ್ತಿದೆ ಎಂದು ಮಂಡ್ಯದಲ್ಲಿಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೂಲಕ ಟ್ವಿಟರ್ ನಲ್ಲಿ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಯವರು, ಸಿದ್ದಕಲೆ ಯ ನಿಷ್ಣಾತರಿಗೆ ಹೊಸ ಕನಸು ಬಿದ್ದ ಹಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವ್ಹೀಕ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಗಲು ಕನಸು ಕಾಣುವವರಿಗೆ ನನ್ನ ಅನುಕಂಪವಿದೆ. ಜೆಡಿಎಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಮತ್ತೆ ಮತ್ತೆ ಅವರು ಅದೇ ಜಪ ಮಾಡುತ್ತಿದ್ದಾರೆ.

ನಮ್ಮ ಸೋಲಿನ ಕಾರಣ ಮಂಡ್ಯ ಜನತೆಗೆ ಗೊತ್ತಿದೆ. ನಿಖಿಲ್ 6 ಲಕ್ಷ ಮತ ಗಳಿಸಿದ್ದರು. ರೈತಸಂಘ, ಕಾಂಗ್ರೆಸ್, ಬಿಜೆಪಿ, ಕೆಲ ಮಾಧ್ಯಮಗಳು ಸೇರಿ ʼಮ್ಯಾನೇಜ್ʼ ಮಾಡಿದ ಚುನಾವಣೆ ಅದು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಹಾಗೇ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು.

ಸಮ್ಮಿಶ್ರ ಸರಕಾರದ ಮೈತ್ರಿಯ ಭಾಗವಾಗಿದ್ದುಕೊಂಡೇ ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ ಹೇಳಿ? ನಿಮ್ಮ ʼಕುತಂತ್ರ ಹೆಜ್ಜೆಗಳುʼ ಎಲ್ಲೆಲ್ಲಿ ಮೂಡಿದವು ಎಂಬುದು ಜನರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಅಂತಹ ಚಕ್ರವ್ಯೂಹ ರಚಿಸಿರಲಿಲ್ಲ ಎಂದಾದರೆ ʼಬ್ರೂಟಸ್ʼ ಪಾಲಿಟಿಕ್ಸ್ ಮಾಡಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದು ಏಕೆ?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಮಗಾದ ಸೋಲು ಕುತಂತ್ರ ರಾಜಕಾರಣಕ್ಕಾದ ಗೆಲುವು. ಅದನ್ನೇ ಇಟ್ಟುಕೊಂಡು ಜೆಡಿಎಸ್ ದುರ್ಬಲವಾಗಿದೆ ಎಂದು ಹೇಳುವುದು ಮೂರ್ಖತನದ ಪರಮಾವಧಿ.

ಕುಮಾರಸ್ವಾಮಿಯವರ ಟೀಕೆಗಳನ್ನು ನೆಗ್ಲೆಕ್ಟ್ ಮಾಡ್ತೀನಿ ಅನ್ನುತ್ತಲೇ ಕುಮಾರಸ್ವಾಮಿ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತೀರಿ ಸಿದ್ದರಾಮಯ್ಯನವರೇ? ನಿಮ್ಮ ರಾಜಕೀಯ ಉಳಿಗಾಲಕ್ಕಾಗಿ ನನ್ನನ್ನು, ದೇವೇಗೌಡರನ್ನು ಟೀಕೆ ಮಾಡುವುದು ನಿಮಗೆ ಅನಿವಾರ್ಯ. ಅದು ತಪ್ಪಿದರೆ ನಿಮಗೆ ಬೇರೆ ವಿಧಿ ಇಲ್ಲ. ಕಾಂಗ್ರೆಸ್ನಲ್ಲಿ ನಿಮಗೆ ಮೂರು ಕಾಸಿನ ಬೆಲೆ ಇಲ್ಲ.

ಜೆಡಿಎಸ್ ಬಗ್ಗೆ ಮಾತನಾಡಲ್ಲ ಅಂತೀರಿ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಅನ್ನುತ್ತೀರಿ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ ಎಂದು ಗೋಳಾಡುತ್ತೀರಿ. ಮತ್ಯಾಕೆ ನಮ್ಮ ಬಗ್ಗೆ ಮಾತು? ಬಿಜೆಪಿಯವರು ನಿಮ್ಮ ಹೇಳಿಕೆಗಳಿಗೆ ಕ್ಯಾರೇ ಅನ್ನುವುದಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ನಿಮಗೆ ಗತಿಯೇ ಇಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *