ಬೆಂಗಳೂರು: ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಜೆ ಜಾರ್ಜ್ ಅವರನ್ನು ಭೇಟಿಯಾಗಲು ಹೋಗಿದ್ದರು. ಈ ಭೇಟಿಗೆ ಹಲವರು ನಾನಾ ರೀತಿಯ ವ್ಯಾಖ್ಯಾನ ಮಾಡಿದ್ದರು. ಅದರಲ್ಲೂ ಸಂಧಾನಕ್ಕೆ ಜಾರ್ಜ್ ಅವರನ್ನ ಕೇಳ್ತಿದ್ದಾರೆ ಎನ್ನಲಾಗಿತ್ತು. ನಿನ್ನೆಯೇ ಜಾರ್ಜ್ ಅವರು ಕೂಡ ಅದಕ್ಕೆ ಉತ್ತರವನ್ನು ನೀಡಿದ್ದರು. ನಾನು ಸಂಧಾನಕಾರನಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಇಂದು ಕೂಡ ಉತ್ತರ ನೀಡಿದ್ದಾರೆ.
ಸಿಎಂ ಬದಲಾವಣೆಯ ವಿಚಾರ ಶಾಸಕರ ಮುಂದೆ ಯಾವುದೇ ಒಪ್ಪಂದ ಆಗಿಲ್ಲ. ಸಿಎಲ್ಪಿ ಸಭೆಯಲ್ಲಿ ಸಿಎಂ ಆಯ್ಕೆ ಮಾಡುವಾಗ ಯಾವುದೇ ರೀತಿಯ ಒಪ್ಪಂದ ಆಗಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. CLP ಸಭೆಯಲ್ಲಿ 50/50 ಅಂತ ಏನು ಚರ್ಚೆಯೇ ಆಗಿಲ್ಲ. ಒಪ್ಪಂದವೇ ಇಲ್ಲದೆ ಒಮ್ಮತದಿಂದ ಅಂದು ಆಯ್ಕೆ ಮಾಡಿದ್ದೆವು ಎಂಬ ಮಾತನ್ನ ಹೇಳಿದ್ದಾರೆ. ಜೊತೆಗೆ ಸಿಎಂ ಬದಲಾವಣೆ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೊಸಪೇಟೆಯಲ್ಲಿ ಹೇಳಿಕೆಯನ್ನ ನೀಡಿದ್ದಾರೆ.
ಅಂದು ಹೈಕಮಾಂಡ್ ಇವರೇ ಸಿಎಂ ಅಂತ ಡಿಕ್ಲೇರ್ ಮಾಡಿದಾಗ ಯಾರು ಏನು ಮಾತನಾಡಿಲ್ಲ. ಹೀಗಾಗಿ ಈ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ನಾವೂ ಆ ವಿಚಾರದಲ್ಲಿ ಮಾತನಾಡುವಂತದ್ದಲ್ಲ. ನಮ್ಮ ಬಳಿ ಒಪ್ಪಂದವಾಗಿಲ್ಲ. ಬಿಜೆಪಿಯವರು ಸುಮ್ಮನೆ ಹೇಳ್ತಾರೆ. ಬಿಜೆಪಿ ಅಧ್ಯಕ್ಷರು ಇವತ್ತು ಬದಲಾಗ್ತಾರೆ ನಾಳೆ ಬದಲಾಗ್ತಾರೆ ಅಂತಾರೆ. ಆ ವಿಚಾರದಲ್ಲಿ ನಿಮಗೆ ಇಲ್ವಾ. ಬರೀ ಕಾಂಗ್ರೆಸ್ ನಲ್ಲಿ ಯಾಕೆ. ಇಲ್ಲಿ ಬೆಂಕಿ ಹಾಕ್ತಾ ಇರೋದೆ ಬಿಜೆಪಿಗರು. ನಿನ್ನಯಷ್ಟೇ ಚಿಕ್ಕಬಳ್ಳಾಪುರದಲ್ಲಿ ಒಂದು ಪ್ರೋಗ್ರಾಂ ಆಯ್ತು. ಆಗ ಸಿಎಂ ಏನ್ ಹೇಳಿದ್ರು, ಡಿಸಿಎಂ ಏನ್ ಹೇಳಿದ್ರು ಹೇಳಿ. ನೀವೆಲ್ಲದಕ್ಕೂ ಬೇರೆ ಅರ್ಥವನ್ನು ಕೊಡೋದನ್ನ ಬಿಡಿ ಎಂದು ಮಾಧ್ಯಮದವರಿಗೆ ಕಿವಿ ಮಾತು ಹೇಳಿದ್ರು.
