ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ನವೆಂಬರ್.02 : ಬೆಂಗಳೂರಿನ ಬೊಮ್ಮನಹಳ್ಳಿ ಉಪವಲಯದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ಸೆರೆಹಿಡಿಯುವ ನೆಪದಲ್ಲಿ ಕೊಂದಿರುವುದು ಶಿಕ್ಷಾರ್ಹ ಅಪರಾಧ ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗುವುದೆಂದು ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಹೇಳಿರುವುದೇನೋ ಸರಿ. ಆದರೆ ಸೆರೆಹಿಡಿಯುವ ನೆಪದಲ್ಲಿ ಚಿರತೆಯನ್ನು ಕೊಂದಿರುವುದು ಯಾವ ನ್ಯಾಯ? ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಅರಣ್ಯ ಇಲಾಖೆಯಲ್ಲಿ ಸುರಕ್ಷತಾ ಪರಿಕರಗಳಿದ್ದರೂ ಚಿರತೆಯನ್ನು ಬಲಿತೆಗೆದುಕೊಂಡಿರುವುದು ಖಂಡನೀಯ.
ಚಿರತೆಯನ್ನು ಕೊಂದಿರುವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೂಡಲೆ ಸೇವೆಯಿಂದ ಅಮಾನತ್ತುಗೊಳಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಹುಲಿ ಉಗುರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ವನ್ಯಜೀವಿಗಳನ್ನು ರಕ್ಷಿಸುವತ್ತ ಕಾಳಜಿ ವಹಿಸಬೇಕಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಉಪಾಧ್ಯಕ್ಷೆ ರತ್ನಮ್ಮ, ಜಗದೀಶ್, ವಿಶ್ವನಾರಾಯಣಮೂರ್ತಿ, ಹರೀಶ್, ಅಖಿಲೇಶ್, ಗೋಪಿನಾಥ್, ಪ್ರದೀಪ್, ಅವಿನಾಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.