ನವದೆಹಲಿ: ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. 1977ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸದೆ ಚುನಾವಣೆ ನಡೆಸಲಾಗಿತ್ತು ಎಂದು ಸ್ಮರಿಸಿದರು. 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಪರವಾಗಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದಾರೆ.
1977ರ ಚುನಾವಣೆಯಲ್ಲಿ ಗೆದ್ದ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಮೊದಲೇ ಘೋಷಿಸದಿದ್ದರೂ ಯಾವುದೇ ಸಮಸ್ಯೆ ಇರಲಿಲ್ಲ. ಜನರು ಬದಲಾವಣೆ ಬಯಸಿದ್ದರು. ಹೊಸಬರು ಪ್ರಧಾನಿಯಾಗಿದ್ದರು’ ಎಂದು ಪವಾರ್ ಹೇಳಿದರು. ಆದರೆ.. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಕೆಲವು ಪಕ್ಷಗಳು ಈಗಾಗಲೇ ಇಂಡಿಯಾ ಮೈತ್ರಿಕೂಟದ ಪರವಾಗಿ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೂಚಿಸಿವೆ.
ಶರದ್ ಪವಾರ್ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಬಾದ್ ಪೂನಾವಾಲಾ ಪ್ರತಿಕ್ರಿಯಿಸಿದ್ದಾರೆ. ಮಮತಾ ಬ್ಯಾನರ್ಜಿಯವರು ಪ್ರಸ್ತಾಪಿಸಿರುವ ಪ್ರಧಾನಿ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಕೂಡ ಒಮ್ಮತಕ್ಕೆ ಬಂದಿಲ್ಲ. ಇಂಡಿಯಾ ಮೈತ್ರಿಯಲ್ಲಿ ಬಿರುಕು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.