ತಿರುವನಂತಪುರಂ: ಏನೇ ಗಲಾಟೆ ಇರಲಿ, ಮನಸ್ತಾಪವಿರಲಿ ಮಹಾತ್ಮಾ ಗಾಂಧೀಜಿ ಎಂದರೆ ಭಕ್ತಿ, ಗೌರವ ಇರಬೇಕು. ಆದರೆ ಇಬ್ಬರ ನಡುವಿನ ಜಗಳದಲ್ಲಿ ಮಹಾತ್ಮಾ ಗಾಂಧಿಯ ಮೂರ್ತಿಯನ್ನೇ ಧ್ವಂಸ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್ ನಡುವೆ ಆಕ್ರೋಶ ಭುಗಿಲೆದ್ದಿದೆ. ಚಿನ್ನ ಕಳ್ಳ ಸಾಗಾಣಿಕೆ ವಿಚಾರದಲ್ಲಿ ಸಿಎಂ ಪಿಣರಾಯಿ ಮೇಲೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಸಿಎಂ ಪಿಣರಾಯಿ ವಿಜಯನ್ ಗೆ ರಾಜೀನಾಮೆ ಕೇಳಿದ್ದರು. ಇದರ ಮುಂದುವರೆದ ಭಾಗವಾಗಿ ವಿಮಾನದಲ್ಲಿ ಪ್ರತಿಭಟನೆ ನಡೆಸಿದ್ದರು.
ಇನ್ನು ಈ ಪ್ರತಿಭಟನೆ ಬಗ್ಗೆ ಮಾತನಾಡಿದ್ದ ಸಿಪಿಐ ಯೂಥ್ ಕಮಿಟಿ ನಾಯಕ, ಕಾಂಗ್ರೆಸ್ ನಾಯಕರು ಸಿಎಂ ಮೇಲೆ ದಾಳಿ ನಡೆಸಿದ್ದಾರೆ. ಕುಡಿದು ಬಂದು ವಿಮಾನದಲ್ಲಿ ಗಲಾಟೆ ಮಾಡಿದ್ದಾರೆ ದಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಸಿಪಿಐ ಶಾಸಜ ಟಿಐ ಮಧುಸೂದನ್ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿತ್ತು.
ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಜೋರಾಗಿ, ಕೆಲವು ದುಷ್ಕರ್ಮಿಗಳು ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಇದ್ದಂತ ಗಾಂಧೀಜಿ ಮೂರ್ತಿಯನ್ನೆ ಧ್ವಂಸಗೊಳಿಸಿದ್ದಾರೆ. 30ಕ್ಕೂ ಹೆಚ್ಚು ಮಂದಿ ನುಗ್ಗಿ ಈ ದಾಂಧಲೆ ನಡೆಸಿದ್ದಾರೆ.