ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ : 48 ಮಂದಿ ಸಾವು

ಸುದ್ದಿಒನ್

ಆಫ್ರಿಕಾದ ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ ನಿಯಂತ್ರಣ ತಪ್ಪಿ ವಾಹನಗಳಿಗೆ ಗುದ್ದಿ ಪಾದಚಾರಿಗಳ ಮೇಲೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಈ ಅಪಘಾತದಲ್ಲಿ ಕನಿಷ್ಠ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ ಪಶ್ಚಿಮ ಕೀನ್ಯಾದ ಜನನಿಬಿಡ ಲೊಂಡಿಯಾನಿ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ.

ಟ್ರಕ್ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದಿದೆ. ಇದರಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ 48 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಕಮಾಂಡರ್ ಜೆಫ್ರಿ ಮಾಯೆಕ್ ಹೇಳಿದ್ದಾರೆ.

ಇನ್ನೂ 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತಕ್ಕೆ ಕಾರಣವಾದ ಲಾರಿಯಲ್ಲಿ ಒಬ್ಬಿಬ್ಬರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಅಪಘಾತ ಸ್ಥಳದಲ್ಲಿ ಪ್ರತಿಕೂಲ ವಾತಾವರಣವಿದ್ದು, ಟ್ರಕ್ ಡಿಕ್ಕಿಯಾಗಿ ಹಲವು ಮಿನಿ ಬಸ್ಸುಗಳು ನಜ್ಜುಗುಜ್ಜಾಗಿವೆ. ವಾಹನಗಳೊಳಗೆ ಸಿಲುಕಿರುವ ಜನರನ್ನು ಬಹಳ ಕಷ್ಟಪಟ್ಟು ಹೊರ ತೆಗೆಯಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ 30 ಜನರನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಕಮಾಂಡರ್ ತಿಳಿಸಿದ್ದಾರೆ.  ಕೆರಿಚೋ ಮತ್ತು ನಕುರು ಪಟ್ಟಣಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಕೆರಿಚೋ ಕಡೆಗೆ ಹೋಗುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡು ಎಂಟು ಮಿನಿ ಬಸ್‌ಗಳು, ಹಲವಾರು ದ್ವಿಚಕ್ರ ವಾಹನಗಳು ಮತ್ತು ರಸ್ತೆ ಬದಿಯಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದಿದೆ ಎಂದು ರಿಫ್ಟ್ ವ್ಯಾಲಿ ಪ್ರಾದೇಶಿಕ ಪೊಲೀಸ್ ಕಮಾಂಡರ್ ಟಾಮ್ ಬೊಯೊ ಓಡೆರೊ ಹೇಳಿದ್ದಾರೆ. ಘಟನೆಯ ಬಗ್ಗೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಕೀನ್ಯಾದ ಸಾರಿಗೆ ಸಚಿವ ಕಿಪ್ಶುಂಬಾ ಮುರ್ಕೊಮೆನ್ ಘೋಷಿಸಿದ್ದಾರೆ.

ಕೆರಿಚೋ ಕೌಂಟಿ ಆಸ್ಪತ್ರೆಯ ಹಿರಿಯ ಡಾ. ಕಾಲಿನ್ಸ್ ಅವರು 45 ಮೃತ ದೇಹಗಳನ್ನು ತಮ್ಮ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ  ಮತ್ತು ಕೆಲವನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *