ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ಕೇಂದ್ರ ಶಿಕ್ಷಣ ಸಚಿವಾಲಯವು 2026–27ನೇ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಂದ್ರಿಯ ವಿದ್ಯಾಲಯದ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ಅಧಿಕೃತ ಅನುಮತಿ ನೀಡಿರುವುದು ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆಯಾಗಿದ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೇಂದ್ರೀಯ ವಿದ್ಯಾಲಯ ಶಾಲೆ ವಿಷಯವು ಈಗ ತಾರ್ಕಿಕವಾಗಿ ಅಂತ್ಯ ಕಂಡಂತಾಗಿದೆ. ಎರಡು ಮೂರು ಕಡೆ ಜಾಗ ಗುರುತಿಸಿದ್ದನ್ನು ಕೇಂದ್ರೀಯ ವಿದ್ಯಾಲಯ ಆಯುಕ್ತರು ನಿರಾಕರಿಸಿದ್ದರು. ಕೊನೆಗೆ ಜಾಲಿಕಟ್ಟೆ ಬಳಿ ರಿ.ಸ.ನಂ. 24ರಲ್ಲಿ 5-00 ಎಕರೆ ಜಾಗವನ್ನು ಗುರುತಿಸಿ, ಜಿಲ್ಲಾಡಳಿತವು ಕೇಂದ್ರೀಯ ಆಯುಕ್ತರಿಗೆ ಹಸ್ತಾಂತಿರಿಸಿದ್ದರು. ಹಾಗೂ ತಾತ್ಕಾಲಿಕವಾಗಿ ಶಾಲೆ ಪ್ರಾರಂಭಿಸಲು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ 12 ಕೊಠಡಿಗಳನ್ನು ಪೀಠೋಪರಕಣಗಳ ಸಮೇತ ಸಿದ್ಧ ಪಡಿಸಿ ಹಸ್ತಾಂತರಿಸಲಾಗಿತ್ತು.
ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ, ಕೇಂದ್ರ ಶಿಕ್ಷಣ ಸಚಿವಾಲಯ 2026–27ನೇ ಶೈಕ್ಷಣಿಕ ಸಾಲಿಗೆ 1 ರಿಂದ 5ನೇ ತರಗತಿವರೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಕ್ರಮೇಣ ಬಾಲವಾಡಿ (ಎಲ್.ಕೆ.ಜಿ. ಮತ್ತು ಯು.ಕೆ.ಜಿ), 5ನೇ ತರಗತಿಯಿಂದ 10ನೇ ತರಗತಿವರೆಗೆ ಹಾಗೂ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗುವುದು. ಜಾಲಿಕಟ್ಟೆ ಬಳಿ ಕೇಂದ್ರೀಯ ವಿದ್ಯಾಲಯ ಶಾಲೆಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಿಕ್ಕೆ ಶೀಘ್ರವಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಚಿತ್ರದುರ್ಗಕ್ಕೆ ಕೇಂದ್ರೀಯ ವಿದ್ಯಾಶಾಲೆ ಮಂಜೂರು ಮಾಡಿಕೊಟ್ಟ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರಿಗೆ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವ ಕೃತಜ್ಷತೆಗಳನ್ನು ಸಂಸದರು ತಿಳಿಸಿದ್ದಾರೆ.






