ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ರಾಜಕೀಯ ಪಕ್ಷಗಳು ಗರಿಗೆದರಿವೆ. ಈ ಬಾರಿ ಕರ್ನಾಟಕ ರಾಜಕೀಯ ಅಖಾಡಕ್ಕೆ ಆಮ್ ಆದ್ಮಿ ಕೂಡ ಸ್ಟ್ರಾಂಗ್ ಆಗಿಯೇ ಎಂಟ್ರಿ ಕೊಡಲು ಸಜ್ಜಾಗಿದೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ತಿಂಗಳ 4ಕ್ಕೆ ದಾವಣಗೆರೆಗೆ ಬರಲಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಹೊಸ ಬದಲಾವಣೆ ತರಲು ಎಎಪಿಗೆ ಬೆಂಬಲ ನೀಡಲು ಕರೆ ನೀಡಲಾಗುತ್ತದೆ.
ದೆಹಲಿಯಲ್ಲಿ ಎರಡು ಬಾರಿ ಸತತ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಂಜಾಬ್ ನಲ್ಲೂ ಅಧಿಕಾರಕ್ಕೇರಿತ್ತು. ಇದೀಗ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲು ನಾನಾ ಕಸರತ್ತು ನಡೆಸುತ್ತಿದೆ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಕೇಜ್ರಿವಾಲ್ ಎಂಟ್ರಿಯಾಗುತ್ತಿದ್ದಾರೆ.