ಪರೀಕ್ಷಾ ಅಕ್ರಮಗಳ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ಕೇಸ್‌ಗಳಲ್ಲೂ ಆರ್.ಡಿ.ಪಾಟೀಲ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಆರ್ ಡಿ ಪಾಟೀಲ್ ಮನೆ ಹಿಂದಿನ ಕಾಂಪೌಂಡ್ ಮೂಲಕ ಪರಾರಿಯಾಗಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಿಜೆಪಿ, ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದೆ. ಆರ್ ಡಿ ಪಾಟೀಲ್ ತಪ್ಪಿಸಿಕೊಳ್ಳುವುದಕ್ಕೆ ಸರ್ಕಾರದ ಸಚಿವರೇ ಕಾರಣ ಎಂದು ಆರೋಪಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿ ಎಸ್ ಯಡಿಯೂರಪ್ಪ, ಆರ್ ಡಿ ಪಾಟೀಲ್ ತಪ್ಪಿಸಿಕೊಂಡಿರುವ ವಿಚಾರ ನನಗೆ ಗೊತ್ತಾಗಿದೆ. ವಿಚಾರ ಏನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆತನ ಬಂಧನಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಇನ್ನು ಬಿವೈ ವಿಜಯೇಂದ್ರ ಅವರು ಮಾತನಾಡಿ, ಹಗಲಿನಲ್ಲಿಯೇ ಆರ್ ಡಿ ಪಾಟೀಲ್ ಎಸ್ಕೇಪ್ ಆಗಿದ್ದಾನೆ. ಬಿಜೆಪಿ ಸರ್ಕಾರವಿದ್ದಾಗ ನಾನಾ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆರ್ ಡಿ ಪಾಟೀಲ್ ಹಾಗೂ ಅವನ ಸಂಗಡಿಗರು ಕಾಂಗ್ರೆಸ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಆರ್ ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಿದ್ದರಲ್ಲಿ, ಸಚಿವರು ಮತ್ತು ಶಾಸಕರ ಕೈವಾಡವಿದೆ ಎಂದಿದ್ದರು.
ಈ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಮಾತನಾಡಿದ್ದು, ಆರ್ ಡಿ ಪಾಟೀಲ್ ಇರಲಿ, ಯಾರೇ ಇರಲಿ. ಸರ್ಕಾರ ದಯೆ ತೋರಿಸಲ್ಲ. ಕಳೆದ ನಾಲ್ಕು ದಿನದಲ್ಲಿ ಈ ಪ್ರಕರಣ ಸಂಬಂಧ ಇಪ್ಪತ್ತು ಜನರ ಬಂಧನವಾಗಿದೆ. ಇನ್ನೆರಡು ದಿನದಲ್ಲಿ ಆರ್ ಡಿ ಪಾಟೀಲ್ ಬಂಧನ ಕೂಡ ಆಗಲಿದೆ ಎಂದಿದ್ದಾರೆ.