ಮಂಡ್ಯ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ರೈತರು ಇಂದು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು, ವಿವಿಧ ಸಂಘಟನೆಗಳು ಇಂದು ಮಂಡ್ಯ ಬಂದ್ ಗೆ ಕರೆ ನೀಡಿವೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂಬ ಉದ್ದೇಶ ಇದಾಗಿದೆ. ಆದರೆ ಇಷ್ಟು ದೊಡ್ಡಮಟ್ಟದ ಹೋರಾಟದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗಿದೆ. ಇದು ರೈತರಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ಇಲ್ಲದೆ ಕೆಆರ್ಎಸ್ ನಲ್ಲಿ ಮೊದಲೇ ನೀರಿನ ಪ್ರಮಾಣ ಕಡಿಮೆ ಇದೆ. ಹೀಗಿರುವಾಗ ಇಂದು ನೀರು ಬಿಟ್ಟ ಪರಿಣಾಮ ನೀರಿನ ಮಟ್ಟ ಕುಸಿದಿದೆ. ಜಲಾಶಯಕ್ಕೆ ಬರುತ್ತಿದ್ದ ಒಳ ಹರಿವು ಸಹ ಇಳಿಮುಖವಾಗಿದೆ. ಇಂದು ಕೆಆರ್ಎಸ್ ಜಲಾಶಯದ ಮಟ್ಟ 90 ಅಡಿಗೆ ಕುಸಿದಿದೆ. ಇದು ರೈತರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
ಸುಪ್ರೀಂ ಕೋರ್ಟ್ ಇನ್ನು ಹದಿನೈದು ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಹೀಗಾಗಿ ಹೋರಾಟದ ನಡುವೆಯೂ ಇಂದು ಸರ್ಕಾರ ನೀರು ಬಿಟ್ಟಿದೆ. ಸುಮಾರು 2973 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿದೆ. ಹೀಗೆ ನೀರನ್ನು ಬಿಡುತ್ತಾ ಹೋದರೆ ಮುಂದೊಂದು ದಿನ ನೀರಿನ ಸಮಸ್ಯೆ ಅನುಭವಿಸುವುದರಲ್ಲಿ ಅನುಮಾನವೇ ಇಲ್ಲ. ಕೃಷಿಯ ಉಪಯೋಗಕ್ಕೆ ಇರಲಿ, ಕುಡಿಯುವ ನೀರಿಗೂ ಬರ ಬರಲಿದೆ ಎಂಬುದು ಎಲ್ಲರ ಆತಂಕವಾಗಿದೆ.