ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಹೊರವಲಯದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ್ದರು ಮತ್ತು ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಕಾಯುತ್ತಿದ್ದ ಎಫ್ಎಸ್ಎಲ್ ವರದಿ ಇಂದು (ಗುರುವಾರ) ರಾತ್ರಿ ಬಂದಿದೆ.
ಈ ವರದಿ ಪ್ರಕಾರ, ಕವಾಡಿಗರಹಟ್ಟಿಯಲ್ಲಿನ ಘಟನೆಗೆ ಕಾರಣವಾದ ಕಲುಷಿತ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಕಂಡುಬಂದಿಲ್ಲ ಎಂದು ವರದಿಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಪರುಶುರಾಮ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಮಧ್ಯಾನ್ಹ ಬಂದ ಜಿಲ್ಲಾ ಸರ್ವೇಕ್ಷಣಾ ಘಟಕದ ವರದಿಯಲ್ಲಿ ಕವಾಡಿಗರಹಟ್ಟಿಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ವರದಿ ಸಲ್ಲಿಸಿದ್ದರು.
ಮೂವರ ಸಾವು ಮತ್ತು ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದರಿಂದಾಗಿ ನೀರಿನಲ್ಲಿ ವಿಷ ಬೆರೆಸಿದ್ದಾರಾ ? ಎಂಬ ಶಂಕೆ ವ್ಯಕ್ತವಾಗಿತ್ತು.ಇದೀಗ ಬಂದ ಎಫ್ಎಸ್ಎಲ್ ವರದಿಯಿಂದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.