ಕವಾಡಿಗರಹಟ್ಟಿ ಪ್ರಕರಣ : ಬೆಂಗಳೂರಿನಿಂದ ಬಂದ ನೀರಿನ ವರದಿಯಲ್ಲೇನಿದೆ ? ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಹೇಳಿದ್ದೇನು ?

suddionenews
2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಆ.09) :  ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದಾಗಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಹುತೇಕರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುತ್ತಿದ್ದು, ಹೊಸದಾಗಿ ದಾಖಲಾಗುವವರ ಸಂಖ್ಯೆಯೂ ಇಳಿಮುಖಗೊಂಡಿದೆ, ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದ ನೀರಿನ 03 ಮಾದರಿಗಳ ವರದಿ ಕೂಡ ಬಂದಿದ್ದು, ನೀರಿನಲ್ಲಿ ಯಾವುದೇ ರಾಸಾಯನಿಕ ಅಂಶ ಕಂಡುಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಹೀಗಾಗಿ ಜನರಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡ ಸರಿದಂತಾಗಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯ ವಾಂತಿಭೇದಿ ಪ್ರಕರಣ ಸಂಬಂಧ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಇಲ್ಲಿನ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಯೋಗ-ಕ್ಷೇಮ, ಚಿಕಿತ್ಸೆ, ಆಹಾರ ಪೂರೈಕೆ ಕುರಿತು ವಿಚಾರಿಸಿದರು.  ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡಕ್ಕೂ ಭೇಟಿ ನೀಡಿ, ವಾರ್ಡ್‌ಗಳ ಸ್ಥಳಾಂತರದ ಬಗ್ಗೆ ಪರಿಶೀಲಿಸಿದ ಅವರು, ನೂತನ ಕಟ್ಟಡದಲ್ಲಿ ಮಕ್ಕಳಿಗೆ ಮತ್ತು ತಾಯಂದಿರಿಗೆ ಪ್ರತ್ಯೇಕವಾಗಿ ಐಸೋಲೇಷನ್ ವಾರ್ಡ್‍ಗಳನ್ನು ಸಿದ್ಧಪಡಿಸಿರುವ ಬಗ್ಗೆ ವೀಕ್ಷಣೆ ಮಾಡಿ,  ಎಲ್ಲ ಚಿಕಿತ್ಸಾ ಉಪಕರಣಗಳ ವ್ಯವಸ್ಥೆ, ಅಗತ್ಯ ಔಷಧಿಗಳನ್ನು ಕೂಡ ಸಮರ್ಪಕವಾಗಿ ಇರಿಸಿಕೊಳ್ಳುವಂತೆ ಸೂಚನೆ ನೀಡಿದರು.  ಅಸ್ವಸ್ಥರು ಗುಣಮುಖರಾಗಿ ಮನೆಗೆ ಹಿಂದಿರುಗುತ್ತಿದ್ದು, ಹೊಸದಾಗಿ ದಾಖಲಾಗುವವರ ಸಂಖ್ಯೆ ಇಳಿಮುಖಗೊಂಡಿದೆ. ಕವಾಡಿಗರಹಟ್ಟಿಯ ಕಾಲೋನಿಯ ಜನರಲ್ಲಿನ ಆತಂಕ ದೂರವಾಗಿದ್ದು, ಸಾರ್ವಜನಿಕರು ಕಾಯಿಸಿ, ಆರಿಸಿದ ನೀರನ್ನೇ ಉಪಯೋಗಿಸಬೇಕು, ಯಾವುದೇ ಆಹಾರ ಸೇವನೆಗೂ ಮುನ್ನ ಕೈ-ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್ ಅವರು ಮಾಹಿತಿ ನೀಡಿ, ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಡಿಎಫ್‍ಎಸಿ ಕೇಂದ್ರಕ್ಕೆ ಕವಾಡಿಗರ ಹಟ್ಟಿಯಲ್ಲಿ ಸಂಗ್ರಹಿಸಲಾದ ನೀರಿನ 03 ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು, ಇದೀಗ ಈ ಪರೀಕ್ಷಾ ವರದಿಯೂ ಕೂಡ ಬಂದಿದೆ.  ಇದರನ್ವಯ ನೀರಿನಲ್ಲಿ ಯಾವುದೇ ರಾಸಾಯನಿಕ ಅಂಶಗಳು ಕಂಡುಬಂದಿಲ್ಲ, ಆದರೆ ಕಾಲರಾಕ್ಕೆ ಕಾರಣವಾಗಬಹುದಾದ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿವೆ.  ಈಗಾಗಲೆ ಕವಾಡಿಗರ ಹಟ್ಟಿಗೆ ಪ್ರತ್ಯೇಕವಾಗಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.  ಮುಂಜಾಗ್ರತಾ ದೃಷ್ಟಿಯಿಂದ ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕು. ಬುಧವಾರದಂದು ಕೇವಲ 03 ಹೊಸ ಪ್ರಕರಣಗಳು ಮಾತ್ರ ದಾಖಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬುಧವಾರದಂದು 18 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಪ್ರಸ್ತುತ 02 ಜನ ಜಿಲ್ಲಾಸ್ಪತ್ರೆ ಹಾಗೂ 31 ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಈವರೆಗೆ ಒಟ್ಟು 226 ಪ್ರಕರಣಗಳು ದಾಖಲಾಗಿ, 188 ಜನ ಗುಣಮುಖರಾಗಿದ್ದಾರೆ.

ಎಲ್ಲ ಅಸ್ವಸ್ಥರಿಗೂ ಉತ್ತಮ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗಾಗಿ ಪ್ರತ್ಯೇಕವಾಗಿ ವಾರ್ಡ್, ಐಸಿಯು, ಸಾಮಾನ್ಯ ವಾರ್ಡ್ ಸೇರಿದಂತೆ ಚಿಕಿತ್ಸೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೆಲವು ಸಮಸ್ಯೆಯಿಂದಾಗಿ ಒಂದು ವಾರ್ಡ್‍ನ್ನು ತಾತ್ಕಾಲಿಕವಾಗಿ ಹೊಸದಾಗಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕ ಐಸಿಯು, ವಾರ್ಡ್ ಹಾಗೂ ದೊಡ್ಡವರಿಗೂ ಒಂದು ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಅಗತ್ಯವಾದ ಸಿಬ್ಬಂದಿ ನಿಯೋಜನೆ ಹಾಗೂ ಔಷಧಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *