ಕವಾಡಿಗರಹಟ್ಟಿ ಪ್ರಕರಣ : ಅಸ್ವಸ್ಥಗೊಂಡವರ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸಿದೆ : ವೈದ್ಯರ ಕಾರ್ಯಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮೆಚ್ಚುಗೆ

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ (ಆ.11) : ಕವಾಡಿಗರ ಹಟ್ಟಿಯಲ್ಲಿ ಜರುಗಿದ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಶುಕ್ರವಾರ ಕವಾಡಿಗರ ಹಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಪ್ರಕರಣದಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸೆಗಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು, ಅಗತ್ಯ ಔಷಧಿ ಹಾಗೂ ಚಿಕಿತ್ಸೆ ದೊರಕುತ್ತಿದೆ.  ದಿನದ 24 ಗಂಟೆಯೂ ಚಿಕಿತ್ಸಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಅಸ್ವಸ್ಥರನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ನಗರದ ಜಿಲ್ಲಾ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ, ಸಾರ್ವಜನಿಕರ ಆರೋಗ್ಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಂಗನಾಥ್ ಅವರು ಲೋಕಾಯುಕ್ತರಿಗೆ ಮಾಹಿತಿ ನೀಡಿದರು.

ಡಾ. ಯಶಸ್ ಅವರು, ಪ್ರತಿ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ಸ್ಥಿತಿಗತಿ ಕುರಿತು ಪರಿಶೀಲಿಸುವ ಜೊತೆಗೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂಬುದಾಗಿ ಧೈರ್ಯ ಹೇಳಲಾಗುತ್ತಿದೆ, ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ವಿವರಿಸಿದರು.  ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಲೋಕಾಯುಕ್ತರು, ಇಂತಹ ಕ್ರಮಗಳಿಂದ ಜನರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಾಸುದೇವರಾಮ್, ಡಿವೈಎಸ್‍ಪಿ ಮೃತ್ಯುಂಜಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್,  ಪೌರಾಯುಕ್ತ ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *