ಚಳ್ಳಕೆರೆ : ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಕಲೆಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಹೀಗಾಗಿ ಜನಪದ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿತ್ರದುರ್ಗ ರಂಗಸೌರಭವ ಕಲಾ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ರಂಗಸಂಗೀತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ರಂಗಪರಿಕರ ಹಾಗೂ ವಾದ್ಯಗಳ ಭರಾಟೆಯ ನಡುವೆಯೂ ಗೇಯತೆ, ನಾದ, ಮಾಧುರ್ಯತೆಯಲ್ಲಿ ಜನಪದ ಕಲಾ ವಾದ್ಯಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ.
ಪರಂಪರೆಯ ಚರ್ಮ ವಾದ್ಯಗಳಾದ ತಮಟೆ, ಉರುಮೆ, ಖಂಜರ, ಡಕ್ಕೆ, ತಬಲ, ಡೊಳ್ಳು ಮುಂತಾದ ವಾದ್ಯಗಳ ಬಾರಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಪ್ರೊ.ಬಿ.ಯು.ನರಸಿಂಹಮೂರ್ತಿ, ನಾಡಿನ ಜಾನಪದ ರಂಗಭೂಮಿಗೆ ಬಹುದೊಡ್ಡ ಪರಂಪರೆ ಇದೆ. ಹಾಗಾಗಿ ಗ್ರಾಮೀಣ ಸಮುದಾಯದ ಜನರು ರೂಢಿಸಿಕೊಂಡಿರುವ ಜನಪದ ಕಲೆಗಳಿಗೆ ಜೀವಂತಿಕೆ ತುಂಬುವ ಕೆಲಸ ಯುವಕರಿಂದ ಆಗಬೇಕು ಎಂದು ಹೇಳಿದರು.
ರಂಗಸೌರಭವ ಕಲಾ ಸಂಘದ ವ್ಯವಸ್ಥಾಪಕ ಕೆ.ಪಿ.ಎಂ.ಗಣೇಶಯ್ಯ, ಜನಪದ ರಂಗಪರಿಕರಗಳ ಜತೆಗೆ ರಂಗಭೂಮಿ ಸಂಸ್ಕøತಿಯ ಪರಿಚಾರಿಕೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿನಾಸಂ ಸಂಸ್ಕøತಿ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕ ಪ್ರೊ.ಡಿ.ಎನ್.ರಘುನಾಥ್, ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಚಿತ್ತಯ್ಯ, ಪ್ರೊ.ಎಸ್.ಸತೀಶ್, ಪ್ರೊ.ಎಂ.ಮುರಳಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲೀಲಾವತಿ ಇದ್ದರು.