ಚಿತ್ರದುರ್ಗ, (ಮೇ.05): ಕನ್ನಡ ಸಾಹಿತ್ಯ ಪರಿಷತ್ತು ಚಟುವಟಿಕೆಗಳ ಮೂಲಕ ಭಾಷಾ ಅಸ್ಮಿತೆಯನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಾ.ತಾರಿಣಿ ಶುಭಾದಾಯಿನಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ವೆಂಕಟೇಶ್ವರ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರಾ ಏಳು ವರ್ಷಗಳ ಸುದಿರ್ಘವಾದ ಇತಿಹಾಸವಿದೆ. ಕಸಾಪ ಗೆ ನೂರು ವರ್ಷಗಳು ಆದ ನಂತರ ಸಂಸ್ಥಾಪನಾ ದಿನಾಚರಣೆಯನ್ನು ವಿಜೃಂಭಣೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. 1915ರಲ್ಲಿ ಹುಟ್ಟಿಕೊಂಡ ಸಂಸ್ಥೆ ಇಂದು ಬರೀ ಕನ್ನಡ ಭಾಷೆಯಲ್ಲದೇ ಕನ್ನಡ ನೆಲ, ಜಲ, ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಗಡಿ ವಿಚಾರಗಳಲ್ಲಿಯೂ ತನ್ನದೇ ಆದ ಹೋರಾಟವನ್ನು ಸಂಸ್ಥೆಯು ಮಾಡಿಕೊಂಡು ಬಂದಿದೆ. ಕಸಾಪವನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಮಹನೀಯರ ಅವಿರತ ಶ್ರಮವಿರುವುದನ್ನು ನಾವು ನೋಡಿದ್ದೇವೆ ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ,ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯ ಪೂರ್ವದಲ್ಲಿಯೂ ಉತ್ತಮ ಕೆಲಸವನ್ನು ಮಾಡಿಕೊಂಡು ಬಂದಿದೆ. ಆಗಿನ ರಾಜ ಮನೆತನಗಳು ಇದನ್ನು ಬೆಳೆಸುವಲ್ಲಿ ಅವಿರತ ಶ್ರಮಪಟ್ಟಿವೆ. ದಕ್ಷಿಣ ಮೈಸೂರು ಸಂಸ್ಥಾನ, ಉತ್ತರ ಜಮುಖಂಡಿ ಸಂಸ್ಥಾನಗಳು ಸೇರಿವೆ. ಇದೇ ರೀತಿಯಾಗಿ ಧಾರವಾಡದ ವಿದ್ಯಾವರ್ಧಕ ಸಂಘವೂ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ. ಬಿ.ಎಂ.ಶ್ರೀ ಆಂಗ್ಲ ಭಾಷಾ ಅಧ್ಯಾಪಕರಾದರೂ ಕನ್ನಡ ಸೇವೆಗೆ ಸದಾ ಮುಂದಿರುತ್ತಿದ್ದರು ಎಂದು ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣ ಮಾತನಾಡಿ, ಭಾಷೆಯ ಉಳಿವಿಗಾಗಿ ಅನೇಕ ಚಳುವಳಿಗಳೇ ರಾಜ್ಯದಲ್ಲಿ ನಡೆದಿರುವುದನ್ನು ನಾವು ಕಂಡಿದ್ದೇವೆ. ಅಂತಹ ಜನಪರ ಚಳುವಳಿಗಳಲ್ಲಿ ಕಸಾಪ ಸದಾ ಮುಂದಿರುತ್ತದೆ. ಉದಾಹರಣೆ ಗೋಕಾಕ್ ಚಳುವಳಿ, ನೆಲ,ಜಲ ಉಳಿವಿಗಾಗಿ ನಡೆದ ಚಳುವಳಿಗಳು ನಮ್ಮ ಕಣ್ಮುಂದೆ ಇವೆ. ನಾವು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ನಮ್ಮ ಕಳ್ಳು-ಬಳ್ಳಿ ಸಂಬಂಧ ಬಂದಾಗ ನಾವೆಲ್ಲಾ ಒಂದಾಗುತ್ತೇವೆ. ಹಾಗೆಯೇ ನಮಗೂ ನಮ್ಮ ಮಾತೃ ಭಾಷೆಗೂ ದೇಸೀ ಭಾಷೆಯಲ್ಲಿ ಹೇಳುವುದಾದರೆ ಕಳ್ಳು-ಬಳ್ಳಿ ಸಂಬಂಧ ಎಂದು ತಿಳಿಸಿದರಲ್ಲದೇ ಮುಂದೆ ಶಿಕ್ಷಕರಾಗುವ ನೀವು ಮಕ್ಕಳಲ್ಲಿಯೂ ಭಾಷಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದು ಪ್ರ.ಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಒಂದು ಕೋಟಿ ಸದಸ್ಯರನ್ನು ಹೊಂದುವ ಗುರಿ ಹೊಂದಿದೆ. ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ನಿಮ್ಮ ಅಂಗೈಯಲ್ಲಿಯೇ ಪರಿಷತ್ತಿನ ಸದಸ್ಯತ್ವವನ್ನು ಪಡೆಯವ ಯೋಜನೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.
ಕಸಾಪ ಸಂಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಡಾ.ತಾರಿಣಿ ಶುಭದಾಯಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕುರಿತು ಪ್ರಾಂಶುಪಾಲ ಈ.ರುದ್ರಮುನಿ, ಮುಖ್ಯ ಶಿಕ್ಷಕ ಹುರುಳಿ ಬಸವರಾಜ್ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ವಿಶ್ವನಾಥ್, ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಸಂಘಟನಾ ಕಾರ್ಯದರ್ಶಿ ವಿ.ಧನುಂಜಯ, ಶಿಕ್ಷಕ ರಮೇಶ್ ಇದ್ದರು.