ತಪ್ಪುಗಳನ್ನು ಹೊಂದಿರುವ ಆದೇಶ ಹೊರಡಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಒತ್ತಾಯ

1 Min Read

ಚಿತ್ರದುರ್ಗ : ಸರಕಾರಿ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಪೋಟೋ, ವೀಡಿಯೋ ಮಾಡದಂತೆ ಹೊರಡಿಸಿದ್ದ ಆದೇಶವನ್ನು ಸರಕಾರ ಹಿಂಪಡೆದಿದೆ. ವ್ಯಾಕರಣ, ಕಾಗುಣಿತ ತಪ್ಪಾಗಿರುವ ಆದೇಶಕ್ಕೆ ಸಹಿ ಮಾಡಿದ ಅಧಿಕಾರಿ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಒತ್ತಾಯಿಸಿದ್ದಾರೆ.

15.07.2022 ರಲ್ಲಿ ಸರಕಾರ ಹೊರಡಿಸಿರುವ ಆದೇಶ ಪ್ರತಿಯಲ್ಲಿ ಕಾಗುಣಿತದ ತಪ್ಪುಗಳು ರಾರಾಜಿಸುತ್ತಿವೆ.  ಮೇಲೆ,ಕರ್ನಾಟಕ, ಭಾಗ, ಆಡಳಿತ, ನಡಾವಳಿ, ಪ್ರಸ್ತಾವನೆ, ಸೇರಿದಂತೆ ಹಲವಾರು ಪದಗಳು ತಪ್ಪಾಗಿ ಮುದ್ರಿಸಲಾಗಿದೆ. ಆದೇಶದಲ್ಲಿ ಏಳೆಂಟು ಕಾಗುಣಿತ ತಪ್ಪುಗಳು ಗಮನ ಸೆಳೆಯುತ್ತವೆ. ತಪ್ಪುಗಳನ್ನು ಹೊಂದಿರುವ ಆದೇಶದ ಪ್ರತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಸಹಿ ಮಾಡಿದ ಅಧಿಕಾರಿ, ಪರಿಶೀಲನೆ ನಡೆಸಿದ ಗುಮಾಸ್ತರು ಸೇರಿದಂತೆ ಎಲ್ಲರ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುದ್ರಣ ದೋಷದಿಂದ ತಪ್ಪು ಆಗಿದ್ದರೂ, ಬೇಜವಾಬ್ದಾರಿಯಿಂದ ಸಹಿ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂಥಹ ಆದೇಶಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ, ಇಂಥಹ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಸರಕಾರವೇ ಕಾಗುಣಿತ ತಪ್ಪುಗಳನ್ನು ಹೊಂದಿರುವ ಆದೇಶ ನೀಡಿರುವುದು ಸಮರ್ಥನೀಯವಲ್ಲ. ತರಾತುರಿಯಲ್ಲಿ ಆದೇಶಗಳನ್ನು ಹೊರಡಿಸಿದರೂ ಸಹ ಅಧಿಕಾರಿಗಳ ಸಹಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂಥಹ ತಪ್ಪು ಆದೇಶಗಳು ಮುಂದಿನ ದಿನಗಳಲ್ಲಿ ಹೊರಬಂದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಮಹೇಶ ಜೋಶಿ ಎಚ್ಚರಿಸಿದ್ದಾರೆ ಎಂದು ಚಿತ್ರದುರ್ಗ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಎಂ.ಶಿವಸ್ವಾಮಿ,
ಜಿಲ್ಲಾಧ್ಯಕ್ಷ,
ಕನ್ನಡ ಸಾಹಿತ್ಯ ಪರಿಷತ್ತು,
ಚಿತ್ರದುರ್ಗ.
9449510078

Share This Article
Leave a Comment

Leave a Reply

Your email address will not be published. Required fields are marked *