ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಕರುನಾಡು ರತ್ನ ಪ್ರಶಸ್ತಿ ಪ್ರದಾನ

suddionenews
2 Min Read

 

ಬೆಂಗಳೂರು, (ಜೂನ್ 19) : ಅರಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಡಿ ಎಸ್ ಮ್ಯಾಕ್ಸ್  ಸಂಸ್ಥೆ ‘ಕರುನಾಡು ರತ್ನ’ ಪ್ರಶಸ್ತಿಯನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ಬಸವಣ್ಣನವರು ಹೇಳುವಂತೆ ನಂಬಿ ಕರೆದರೆ ಖಂಡಿತ ಶಿವ ಓಗೊಡುವನು. ನಂಬಿಕೆಯನ್ನು ಕಳೆದುಕೊಂಡರೆ ಸಾಧನೆ ಸಾಧ್ಯವಿಲ್ಲ.

ಡಿ.ಎಸ್. ಮ್ಯಾಕ್ಸ್ ಸಂಸ್ಥೆ ನೌಕರರ ಮತ್ತು ಸಾರ್ವಜನಿಕರ ನಂಬಿಕೆ ಗಳಿಸಿದೆ. ಯಾವುದೇ  ಸಂಸ್ಥೆಗೆ ಗೌರವ ಬರುವುದು ಆ ಸಂಸ್ಥೆಯಲ್ಲಿನ ನೌಕರರ ಶ್ರದ್ಧೆ, ವಿಶ್ವಾಸ,  ನಂಬಿಕೆಗಳನ್ನು ಅವಲಂಬಿಸಿರುತ್ತದೆಯೇ ಹೊರತು, ಆ ಸಂಸ್ಥೆ ಹೊಂದಿರುವ ಹಣ, ಆಸ್ತಿಯನ್ನಲ್ಲ. ಈ ಸಂಸ್ಥೆ ಕೇವಲ ಲಾಭಕ್ಕಾಗಿ ಕೆಲಸ ಮಾಡದೆ  ಸಾರ್ವಜನಿಕ ಸೇವೆಯಲ್ಲೂ ತೊಡಗಿರುವುದು ಅನುಕರಣೀಯವಾದುದು. ಕರೋನಾ ಕಾಲದಲ್ಲಿ ಈ ಸಂಸ್ಥೆ ತನ್ನ ನೌಕರರನ್ನು ಮನೆಗೆ ಕಳುಹಿಸದೆ ಅವರಿಗೆ ವೇತನದ ಜೊತೆಗೆ ಬೇಕಾದ ಅನುಕೂಲಗಳನ್ನು  ಕಲ್ಪಿಸಿಕೊಟ್ಟು ಇತರೆ ಸಂಸ್ಥೆಗೆ ಮಾದರಿಯಾಗಿದೆ.

ಸಂಸ್ಥೆಯ ಅಧ್ಯಕ್ಷ ಸತೀಶ್ ಅವರ ಹುಟ್ಟು ಹಬ್ಬ. ಈ ದಿನ ನಮ್ಮ ಪ್ರಕಾರ ಸಿಂಹಾವಲೋಕನ ಮಾಡುವ ಸಮಯ. ಇನ್ನು ಹೆಚ್ಚಾಗಿ ಸಾರ್ವಜನಿಕ ಸೇವೆಯನ್ನು ಮಾಡಲಿ. ಸಂಸ್ಥೆ ಅದ್ಭುತ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಾಧಕರಿಗೆ ಮತ್ತು ಸಾಧನೆ ಮಾಡುವವರಿಗೆ ಪ್ರೇರಣಾದಾಯಕವಾದುದು.. ಶಾಲು, ಹಾರ ಭಾರವಾಗದೆ ನಮ್ಮಲ್ಲಿ  ಜಾಗೃತಿಯನ್ನು ಮೂಡಿಸುತ್ತದೆ.

ಕಲಾವಿದರು ಮನೋರಂಜನೆ ನೀಡುವುದರ ಜೊತೆಗೆ ಜನರನ್ನು ಜಾಗೃತರನ್ನಾಗಿ ಮಾಡುತ್ತಾರೆ. ಲಂಚಕ್ಕೆ ಕೈ ಒಡ್ಡುವುದರಿಂದ ಸತ್ಯ ಹೇಳುವ  ಬಾಯಿ ಬಂದ್ ಆಗುತ್ತದೆ. ಸಾರ್ವಜನಿಕವಾಗಿ ಬಂದ ಹಣವನ್ನು ಸತ್ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು. ‘ಲೋಕ ವಿರೋಧಿ ಶರಣ ಯಾರಿಗೂ ಅಂಜುವವರಲ್ಲ’ ಎನ್ನುವಂತೆ ಬಾಳಬೇಕು ಎಂದರು.

ಪೂಜ್ಯರ ಜೊತೆ ಪದ್ಮಶ್ರೀ ಎ ಎಸ್ ಕಿರಣ್ ಕುಮಾರ್, ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ, ದೊಡ್ಡರಂಗೇಗೌಡ, ತುಳಸಿ ಗೌಡ, ಮಾಲತಿಹೊಳ್ಳ, ಸವಿತಾ ಮೋನಿಸಾ ಅವರಿಗೆ ನೀಡಲಾಯಿತು.
ಕಲಾಶ್ರೀ ಪ್ರಶಸ್ತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಕನಿಕಲ ಭರಣಿ ಅವರಿಗೆ ನೀಡಲಾಯಿತು.

ಸಿದ್ಧಗಂಗಾ ಶ್ರೀ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಆತಿಥಿಗಳಾಗಿ ವಸತಿ ಸಚಿವ ವಿ ಸೋಮಣ್ಣ, ಪಬ್ಲಿಕ್ ಟಿ ವಿಯ ರಂಗನಾಥ್, ಡಿ ಕೆ ಶಿವಕುಮಾರ್, ಮಾಜಿ ಸಚಿವ ರಾಜುಗೌಡ ಮಾತನಾಡಿದರು.

ಡಿ ಎಸ್ ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥರಾದ ಕೆ ವಿ ಸತೀಶ್, ದಯಾನಂದ ಮತ್ತಿತರ ಪದಾಧಿಕಾರಿಗಳು, ನೌಕರ ವರ್ಗ ಸೇರಿದಂತೆ ಸಾವಿರಾರು ಪ್ರೇಕ್ಷಕರು ಭಾಗವಹಿಸಿದ್ದರು.

ವರದಿ : ಹೆಚ್ ಎಸ್ ದ್ಯಾಮೇಶ್

Share This Article
Leave a Comment

Leave a Reply

Your email address will not be published. Required fields are marked *