ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 20 : ಸಂಘದ ಕಾರ್ಯ ಚಟುವಟಿಕೆ, ಸರ್ವ ಸದಸ್ಯರ ಸಭೆ ಹಾಗೂ 75 ವರ್ಷಗಳನ್ನು ಪೂರೈಸಿರುವ ಸಂಘದ ಸದಸ್ಯ ಪ್ರಾಧ್ಯಾಪಕರುಗಳಿಗೆ ಸನ್ಮಾನ ಸಮಾರಂಭ ಮಾಡಬೇಕಾಗಿರುವುದರಿಂದ ಸದಸ್ಯರುಗಳೆಲ್ಲರು ಸಂಘದೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ ಮನವಿ ಮಾಡಿದರು.
ಆಕಾಶವಾಣಿ ಹಿಂಭಾಗವಿರುವ ಸಂಗಮೇಶ್ವರ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕದ ಕಚೇರಿ ಉದ್ಗಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ವಿವಿಧ ಘಟಕಗಳ ಪೈಕಿ ಚಿತ್ರದುರ್ಗ ಜಿಲ್ಲಾ ಘಟಕ ತನ್ನದೆ ಆದ ಸ್ವಂತ ಕಚೇರಿಯನ್ನು ಹೊಂದಿದೆ. ಮುಂದಿನ ರೂಪುರೇಷೆಗಳಿಗೆ ಸಂಬಂಧಿಸಿದಂತೆ ಸದಸ್ಯರುಗಳು ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಜೆ.ಮಹಾಂತೇಶ್ ಮಾತನಾಡಿ ಮುಂದೆ ದೊಡ್ಡ ಕಾರ್ಯಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಸಂಘದ ಪ್ರತಿಯೊಬ್ಬ ಸದಸ್ಯರುಗಳ ಮೇಲೆ ಜವಾಬ್ದಾರಿಯಿದೆ. ಹಾಗಾಗಿ ಸಂಘಕ್ಕೆ ಬಲ ತುಂಬುವತ್ತ ಗಮನ ಕೊಡಬೇಕೆಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ.ನಟರಾಜ್ ಮಾತನಾಡಿ ಚಿತ್ರದುರ್ಗದಲ್ಲಿ ವಾರ್ಷಿಕ ಸಮ್ಮೇಳನ ನಡೆಸಬೇಕಿದೆ. ಹದಿನೈದು ದಿನಗಳಿಂದಲೂ ಎಲ್ಲರಿಗೂ ಮೆಸೇಜ್ ಮೇಲೆ ಮೆಸೇಜ್ ಹಾಕಲಾಗಿದೆ. ಪ್ರತಿಯೊಬ್ಬರು ಸ್ವಇಚ್ಚೆಯಿಂದ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿರುವುರಿಂದ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಂಘಟನೆ ಕಷ್ಟವಾಗುತ್ತದೆ. ಇಬ್ಬರು ಪದಾಧಿಕಾರಿಗಳ ಭಿನ್ನಾಭಿಪ್ರಾಯಕ್ಕೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ಸಹಾಯ, ಸಂಪನ್ಮೂಲ ವಿನಿಯೋಗಿಸಿಕೊಂಡು ಸಂಘವನ್ನು ಬಲಪಡಿಸೋಣ ಎಂದು ನುಡಿದರು.
ಡಾ.ಎ.ಗೋಪಾಲ್, ಖಜಾಂಚಿ ಶಿವಪ್ಪ, ಡಾ.ಎಂ.ಕೆ.ಪ್ರಭುದೇವ್, ಸಹ ಕಾರ್ಯದರ್ಶಿ ಬಸವರಾಜ್ ಇವರುಗಳು ವೇದಿಕೆಯಲ್ಲಿದ್ದರು. ನಿವೃತ್ತ ಪ್ರಾಚಾರ್ಯರಾದ ಹರೀಶ್ ಜಿಲ್ಲಾ ಘಟಕದ ಕಚೇರಿ ಉದ್ಗಾಟಿಸಿದರು.
ಗೋಪಾಲ್ ಸ್ವಾಗತಿಸಿದರು. ನಾಗರಾಜ್ ನಿರೂಪಿಸಿದರು.


