ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

3 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.15) : ರೈತ ವಿರೋಧಿ ಕರಾಳ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರೈತ ವಿರೋಧಿ ಕಾಯಿದೆಯನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯುವತನಕ ರೈತರಿಗೆ ಸಮಾಧಾನವಿರುವುದಿಲ್ಲ. ಕೇಂದ್ರ ಸರ್ಕಾರ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆದ ಮೇಲೆ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯುವುದಕ್ಕೇಕೆ ಮೀನಾಮೇಷ ಎಣಿಸುತ್ತಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆಯಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು ಎಂದು ಒತ್ತಾಯಿಸಿದರು.

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕೊಬ್ಬರಿ ಬೆಳೆಗಾರರು ಸಂಕಷ್ಠದಲ್ಲಿದ್ದಾರೆ. ಸರ್ಕಾರ ನೆರವಿಗೆ ಧಾವಿಸಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿಯೇ ಘೋಷಿಸಿದಂತೆ ಹತ್ತು ಕೆ.ಜಿ.ಅಕ್ಕಿ ಉಚಿತವಾಗಿ ನೀಡಲು ಮುಂದಾಗಿರುವುದರಿಂದ ಕೇಂದ್ರ ಸರ್ಕಾರ ಅಕ್ಕಿ ನೀಡುವುದಿಲ್ಲ ಎಂದು ಯೋಜನೆಗೆ ಅಡ್ಡಗಾಲಾಗಿದೆ. ಇದಕ್ಕೆ ಪರ್ಯಾಯವಾಗಿ ಹಳೆ ಮೈಸೂರು ಭಾಗದ ಜನ ರಾಗಿ ಹೆಚ್ಚಾಗಿ ಬಳಸುವುದರಿಂದ ಅಕ್ಕಿಯ ಜೊತೆ ರಾಗಿ ಕೊಡಬಹುದು. ಇನ್ನು ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನ ಜೋಳ ಬಳಸುವುದರಿಂದ ಅಕ್ಕಿಯ ಬದಲು ಅಲ್ಲಿ ಜೋಳ ಕೊಡಬಹುದು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಹಿಂದಿನ ಬಿಜೆಪಿ.ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿಯ ಒಡೆಯ ಎನ್ನುವ ಮಹಾತ್ವಾಂಕ್ಷೆಗೆ ಕೊಡಲಿ ಪೆಟ್ಟು ನೀಡಿದೆ. ಎ.ಪಿ.ಎಂ.ಸಿ. ಕಾಯಿದೆಯನ್ನು ತಿದ್ದುಪಡಿ ಮಾಡಿ, ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಿ ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯನ್ನೆ ನಂಬಿಕೊಂಡಿರುವ ರೈತನನ್ನು ಹೈರಾಣಾಗಿಸಿದೆ.

ಈ ಮೂರು ತಿದ್ದುಪಡಿ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ಚುನಾವಣಾ ಪೂರ್ವದಲ್ಲಿಯೇ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಕೂಡಲೆ ಅನ್ನ ಭಾಗ್ಯ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣವನ್ನು ಒದಗಿಸಿದ್ದಾರೆ. ಅದೆ ರೀತಿ ರೈತರಿಗೆ ಮಾರಕವಾಗಿರುವ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗೇನೋ ರೈತರ ಮೇಲೆ ಕನಿಕರವಿರಬಹುದು. ಆದರೆ ಎಲ್ಲಾ ಪಕ್ಷಗಳಲ್ಲಿಯೂ ಭೂಗಳ್ಳರಿರುವುದರಿಂದ ರೈತ ವಿರೋಧಿ ಕಾಯಿದೆಯನ್ನು ಹಿಂದಕ್ಕೆ ಪಡೆಯಲು ತಡವಾಗುತ್ತಿದೆಯೇನೋ ಅನ್ನಿಸುತ್ತದೆ. ಹಿಂದಿನ ಸರ್ಕಾರ ಭೂಮಂಜೂರಾತಿ ಕಾಯಿದೆಯ ನಿಯಮಗಳನ್ನು ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿವಾರಕ್ಕೆ ಮಂಜೂರು ಮಾಡಿದೆ. ಅವುಗಳನ್ನೆಲ್ಲಾ ರದ್ದುಪಡಿಸಿ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದರು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡುತ್ತ ವಿಧಾನಸಭಾ ಚುನಾವಣೆಗೂ ಮುಂಚೆಯೇ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿದ ಕಾಂಗ್ರೆಸ್ ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುತ್ತೇವೆಂದು ಪ್ರಣಾಳಿಕೆಯಲ್ಲಿ ಏಕೆ ಘೋಷಿಸಲಿಲ್ಲ? ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2022 ವಿದ್ಯುಚ್ಚಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಮುಂಬರುವ ಅಧಿವೇಶನದಲ್ಲಿ ತೀರ್ಮಾನಿಸಬೇಕು. ಹತ್ತು ಹೆಚ್.ಪಿ.ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತವಾಗಿ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡಿ ಕೃಷಿ ವಿದ್ಯುತ್ ಮೀಟರ್‍ಗಳಿಗೆ ಆಧಾರ್ ಜೋಡಣೆ ಮಾಡುವುದನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ರೈತ ಮುಖಂಡರುಗಳಾದ ಕೆ.ಪಿ.ಭೂತಯ್ಯ, ತಾಲ್ಲೂಕು ಅಧ್ಯಕ್ಷ ಧನಂಜಯ, ಸಿ.ನಾಗರಾಜ್ ಮುದ್ದಾಪುರ, ಎಸ್.ರೇವಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಣ್ಣ, ಸಿದ್ದಪ್ಪ, ಎಂ.ಬಿ.ತಿಪ್ಪೇಸ್ವಾಮಿ, ಕೆ.ಸಿ.ಹೊರಕೇರಪ್ಪ, ಬಿ.ಓ.ಶಿವಕುಮಾರ್, ಆರ್.ಚೇತನ, ಎಂ.ಲಕ್ಷ್ಮಿಕಾಂತ, ತಿಪ್ಪೇಸ್ವಾಮಿ, ಓ.ಟಿ.ತಿಪ್ಪೇಸ್ವಾಮಿ, ರೈತ ಮಹಿಳೆಯರಾದ ಕಲ್ಪನಾ, ಶಶಿಕಲ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *