ಎನ್.ಉಪ್ಪಾರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

suddionenews
1 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ನ.06) : ಚಳ್ಳಕೆರೆ ತಾಲ್ಲೂಕು ಗೊಲ್ಲಹಳ್ಳಿ ಮಜುರೆ ಎನ್.ಉಪ್ಪಾರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಎನ್.ಉಪ್ಪಾರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ 2017 ರಲ್ಲಿಯೇ ಸರ್ಕಾರದ ಆದೇಶವಾಗಿದ್ದು, ಗೊಲ್ಲಹಳ್ಳಿಯ ಕೆಲವು ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿರುವ ಕಾರಣಕ್ಕೆ ಕಂದಾಯ ಗ್ರಾಮವನ್ನಾಗಿ ಘೋಷಿಸಲು ವಿಳಂಭವಾಗುತ್ತಿದೆ. ಎನ್.ಉಪ್ಪಾರಹಟ್ಟಿ ಗ್ರಾಮವು ಕಂದಾಯ ಗ್ರಾಮವಾಗಲು ಸರ್ಕಾರ ನಿಗಧಿಪಡಿಸಿರುವ ಎಲ್ಲಾ ನಿಯಮಗಳಿಗೂ ಒಳಪಟ್ಟಿದೆ.

ಈ ಗ್ರಾಮದಲ್ಲಿ ಮೂರು ನೂರು ಮನೆಗಳಿದ್ದು, ಎರಡು ಸಾವಿರ ಜನಸಂಖ್ಯೆಯಿದೆ. ಹಾಲಿ ಇರುವ ಕಂದಾಯ ಗ್ರಾಮಕ್ಕೂ ಉಪ್ಪಾರಹಟ್ಟಿಗೂ ಕೇವಲ 1.5 ಕಿ.ಮೀ.ಅಂತರವಿದೆ. ಹಾಗಾಗಿ ತಕ್ಷಣವೇ ಎನ್.ಉಪ್ಪಾರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ರೈತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಟಿ.ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ, ರುದ್ರಸ್ವಾಮಿ ಚಿಕ್ಕಪ್ಪನಹಳ್ಳಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *