ಚಿತ್ರದುರ್ಗ, (ಏ.26) : ರೈತ ವಿರೋಧಿ ಕರಾಳ ಕಾನೂನುಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಯಾವುದೆ ಚರ್ಚೆಯಿಲ್ಲದೆ ರಾಜ್ಯ ಸರ್ಕಾರ ಶಾಸಕರ ಸಂಬಳ ಸಾರಿಗೆ ಹೆಚ್ಚಳ ಮಾಡಿದೆ.
ಅದೇ ರೀತಿ ಸರ್ಕಾರಿ ನೌಕರರ ವೇತನವನ್ನು ಅಧಿಕಗೊಳಿಸಿದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನ ಸಮಸ್ಯೆಗಳನ್ನು ಆಲಿಸುತ್ತಿಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ವಿಮೆ ಪರಿಹಾರ ಇನ್ನು ತಲುಪುತ್ತಿಲ್ಲ. ಅದಕ್ಕಾಗಿ ಸರ್ಕಾರದ ವಿರುದ್ದ ಪ್ರತಿಭಟನೆ, ಚಳುವಳಿ ನಡೆಸುವಂತ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗುತ್ತಿದೆ. ಇದೆಲ್ಲದರ ದುಷ್ಪರಿಣಾಮ ಜನಸಾಮಾನ್ಯರ ಬದುಕಿಗೆ ಹೊರೆಯಾಗುತ್ತಿದೆ. ಮೂರು ನಾಲ್ಕು ವರ್ಷಗಳಿಂದ ರೈತರಿಗೆ ವಿಮೆ ಹಣ ತಲುಪುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ವಂಚಿಸುತ್ತಲೆ ಬರುತ್ತಿವೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಉತ್ತರ ಭಾರತದ ರಾಜ್ಯಗಳು ರೈತರಿಂದ ಭತ್ತ ಮತ್ತು ಗೋಧಿಯನ್ನು ಖರೀಧಿಸುತ್ತಿವೆ. ಅದೇ ನಮ್ಮ ರಾಜ್ಯದಲ್ಲಿ ರೈತರಿಂದ ಏಕೆ ಖರೀಧಿಸುತ್ತಿಲ್ಲ. ಕೂಡಲೆ ಈ ತಾರತಮ್ಯ ನಿವಾರಣೆಯಾಗಬೇಕು. ಅದಕ್ಕಾಗಿ ಬಜೆಟ್ನಲ್ಲಿ ಐದು ಸಾವಿರ ಕೋಟಿ ರೂ.ಆವರ್ತ ನಿಧಿ ಮೀಸಲಿಡಬೇಕು.
ರೈತರು ಭಾಗ ಮತ್ತು ಕ್ರಯ ಮಾಡಿಕೊಳ್ಳಲು ನೀತಿ ನಿಯಮ ಬದಲಾಯಿಸಿ ಕಾಲಮಿತಿ ನಿಗಧಿಗೊಳಿಸಿರುವುದನ್ನು ರದ್ದುಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ಬಾಬು ಮಾತನಾಡಿ ರೈತ ವಿರೋಧಿ ಕರಾಳ ಕಾಯಿದೆಗಳನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯಬೇಕು. ಖರೀಧಿ ಕೇಂದ್ರಗಳನ್ನು ಆರಂಭಿಸಿ ರೈತ ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಸರ್ಕಾರ ಖರೀಧಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ವಿದ್ಯುತ್ ಸಮಸ್ಯೆ ದಿನದಿಂದೆ ದಿನೆ ಜಾಸ್ತಿಯಾಗುತ್ತಿದ್ದು, ಅಕ್ರಮ-ಸಕ್ರಮಗೊಳಿಸಬೇಕು.
ಕಳೆದ ಎರಡು ವರ್ಷಗಳಿಂದಲೂ ಕೋವಿಡ್ ಸಂಕಷ್ಟದಲ್ಲಿದ್ದೇವೆ. ರೈತರ ಬದುಕಿನ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸುವ ಬದಲು ಅನಗತ್ಯ ವಿವಾದಗಳನ್ನು ಹುಟ್ಟುಹಾಕುತ್ತ ಜಾತಿ-ಧರ್ಮಗಳ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವುದರ ವಿರುದ್ದ ಎಲ್ಲರೂ ಜಾಗೃತರಾಗಬೇಕಿದೆ ಎಂದು ಎಚ್ಚರಿಸಿದರು.
2019-20 ಹಾಗೂ 2020-21 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ನಷ್ಟವಾಗಿದ್ದು, ಬೆಳೆ ನಷ್ಟ ಪರಿಹಾರ, ಬೆಳೆವಿಮೆ ಪಾವತಿಸಿರುವ ರೈತರಿಗೆ ತಲುಪಿಲ್ಲ. ತೆಲಂಗಾಣ ಮಾದರಿಯಲ್ಲಿ ಇನ್ಪುಟ್ ಸಬ್ಸಿಡಿ ರಾಜ್ಯದ ಎಲ್ಲಾ ರೈತರಿಗೆ ತಲುಪಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡುತ್ತ ದೇಶಕ್ಕೆ ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದಾನೆ. ರೈತ ಬೆಳೆಯುವ ಎಲ್ಲಾ ಬಗೆಯ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ.
ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಡ್ರಿಪ್ ಇರಿಗೇಷನ್ ಪೈಪ್ಗಳು ರೈತರ ಕೈಗೆಟುಕದಂತಾಗಿದೆ. ರೈತರ ವಿಚಾರ ಬಂದಾಗ ವಿರೋಧ ಪಕ್ಷಗಳು ಧ್ವನಿ ಎತ್ತದೆ ಮೌನ ವಹಿಸಿರುವುದನ್ನು ನೋಡಿದರೆ ರೈತರ ಬದುಕು ಎಷ್ಟು ನಿಕೃಷ್ಟವಾಗಿದೆ ಎನ್ನುವುದು ಗೊತ್ತಾಗುತ್ತದೆ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಜಾಬ್, ಹಲಾಲ್, ಜಟ್ಕ್ಕಟ್ನಂತ ಅನಗತ್ಯ ವಿವಾದಗಳನ್ನು ಕೈಬಿಟ್ಟು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಧನಂಜಯ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಡಿ.ಮಲ್ಲಿಕಾರ್ಜುನಪ್ಪ, ರೈತ ಮುಖಂಡರುಗಳಾದ ಪುಟ್ಟೀರಮ್ಮ, ದಸ್ತಗೀರ್ಸಾಬ್, ಶಿವಕುಮಾರ್, ಮಲ್ಲಿಕಾರ್ಜುನ್, ಅಣ್ಣಪ್ಪ, ಮೋಹನ್ಕುಮಾರ್, ಪ್ರವೀಣ್ಕುಮಾರ್, ಚೇತನ್, ಮಂಜಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.