ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಪರಿಶೀಲನೆ ಸಭೆ ನಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಸ್ಥಿತಿಗತಿ, ಆಸ್ಪತ್ರೆ ದಾಖಲಾತಿ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೇ ಈ ಮಾರ್ಗಸೂಚಿಯಲ್ಲಿ ಕೆಲ ರಿಯಾಯಿತಿಗಳನ್ನು ನೀಡಲು ಆರಂಭಿಸಲಾಗಿತ್ತು. ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್ ನಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಸರ್ಕಾರ ನಿಯಮಗಳನ್ನು ಹಿಂಪಡೆಯುತ್ತಿದೆ ಎಂದಾಕ್ಷಣ ಸಾರ್ವಜನಿಕರು ಮೈ ಮರೆಯಬಾರದು. ಮುಂದೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಕೋವಿಡ್ ಇರುವಾಗಲೂ ಹೇಗೆ ಸೂಕ್ತ ನಡವಳಿಕೆಗಳನ್ನು ಪಾಲಿಸಬೇಕೆಂದು ಜನರಿಗೆ ತಿಳಿದಿದೆ. ಯಾರಿಗೂ ಆರ್ಥಿಕ ನಷ್ಟವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.