ಬೆಂಗಳೂರು: ಎಂಇಎಸ್ ಪುಂಡರ ಪುಂಡಾಟಿಕೆಗೆ ಬ್ರೇಕ್ ಹಾಕಲು ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನ ಬ್ಯಾನ್ ಮಾಡಿ ಎಂದು ಕನ್ನಡಪರ ಸಂಘಟನೆ ಬಂದ್ ಗೆ ಕರೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಇದ್ದರು ಕೂಡ ಡಿಸೆಂಬರ್ 31 ರಂದು ಬಂದ್ ಮಾಡಿಯೆರ ಮಾಡ್ತೀವಿ ಅಂತ ಕನ್ನಡಪರ ಸಂಘಟನೆಗಳು ಪಣ ತೊಟ್ಟಿವೆ. ಎಲ್ಲಾ ಸಂಘಟನೆಗಳು ಬೆಂಬಲ ನೀಡಿವೆ ಎಂದೆ ಹೇಳಲಾಗುತ್ತಿದೆ. ಆದ್ರೆ ಇದ್ದಕ್ಕಿದ್ದ ಹಾಗೆ ಬೆಂಬಲ ಸೂಚಿಸಿದ್ದ ಪ್ರವೀಣ್ ಶೆಟ್ಟಿ ಬಣ ಹಿಂದೆ ಸರಿಯುವ ಲಕ್ಷಣಗಳು ಕಾಣ್ತಿವೆ.
ಇದಕ್ಕೆ ಕಾರಣ ಪ್ರವೀಣ್ ಶೆಟ್ಟಿ ಬಣ ಬರೆದಿರುವ ಪತ್ರ. ಹೌದು ಕರವೇ ಪ್ರವೀಣ್ ಶೆಟ್ಟಿ ಬಣ ಬಂದ್ ಮುಂದೂಡುವಂತೆ ಪತ್ರ ಬರೆದಿದ್ದಾರೆ. 22ರಂದು ಎಲ್ಲಾ ಸಂಘಟನೆಯವರು ಒಮ್ಮತದಿಂದ 31ರ ಶುಕ್ರವಾರ ಬಂದ್ ಮಾಡಬೇಕೆಂದು ಕರೆ ನೀಡಿದ್ದು ಸರಿಯಷ್ಟೆ. ಆದ್ರೆ ಆನಂತರದಲ್ಲಿ ನಡೆದ ಬೆಳವಣಿಗೆಗಳು ನಮ್ಮ ಈ ನಿರ್ಧಾರ ಪ್ರಸ್ತುತ ಸರಿ ಅಲ್ಲವೆಂಬ ಭಾವ ಮೂಡುತ್ತಿದೆ. ಒಮಿಕ್ರಾನ್ ತನ್ನ ಕಬಂದ ಬಾಹುಗಳನ್ನ ಚಾಚುತ್ತಿದೆ. ಕಾರಣ 144 ಸೆಕ್ಷನ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿದೆ.
ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿರುವ ವರ್ತಕರು, ವ್ಯಾಪಾರಿಗಳು ನಮ್ಮ ಈ ನಿರ್ಧಾರದಿಂದ ಆತಂಕದಲ್ಲಿದ್ದಾರೆ. ಹಳೆ ವರ್ಷದ ಕೊನೆ ಹೊಸ ವರ್ಷದ ಹಾದಿಯಲ್ಲಿ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಿರುತ್ತದೆ. ಸದಾಕಾಲ ನಮಗೆ ಬೆಂಬಲವಾಗಿ ನಿಲ್ಲುತ್ತಿದ್ದ ಚಿತ್ರೋದ್ಯಮದ ಕೆಲವು ಸಂಘಟನೆಗಳು ನಮ್ಮ ವಿರುದ್ಧ ಅಸಮಾಧಾನ ಹೊರ ಹಾಕಿವೆ. ಇನ್ನು ಬೆಳಗಾವಿಯ ಕ್ರಿಯಾ ಸಮಿತಿ ಕೂಡ ನಮಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಂದ್ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.