ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28 : ಕನ್ನಡ ನಾಡಿನ ಜೀವ ನದಿ ಕಾವೇರಿ ನೀರನ್ನು ಪ್ರತಿನಿತ್ಯ ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ವಿವಿಧ ಜನಪರ ಸಂಘಟನೆಗಳು, ಹೋರಾಟಗಾರರು, ರೈತರು ಶುಕ್ರವಾರ ಕರ್ನಾಟಕ ಬಂದ್‍ಗೆ ಕರೆ ನೀಡಿರುವುದಕ್ಕೆ ಚಿತ್ರದುರ್ಗದ ಸಮಸ್ತರು ಬೆಂಬಲಿಸುವಂತೆ ಕರ್ನಾಟಕ ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮನವಿ ಮಾಡಿದರು.
ರೈತರು, ವಿವಿಧ ಸಂಘಟನೆಗಳು, ಹೋರಾಟಗಾರರ ಜೊತೆ ಪ್ರವಾಸಿ ಮಂದಿರದಲ್ಲಿ ಗುರವಾರ ನಡೆದ ಸಭೆಯಲ್ಲಿ ಚರ್ಚಿಸಿದ ಜೆ.ಯಾದವರೆಡ್ಡಿ ರಾಜ್ಯದ ಜಲಾಶಯಗಳು ನೀರಿಲ್ಲದೆ ಬರಿದಾಗುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಕರ್ನಾಟಕದ ಪಾಲಿಗೆ ಕರಾಳ ಶಾಸನವಿದ್ದಂತೆ. ಹಾಗಾಗಿ ಚಿತ್ರದುರ್ಗದಲ್ಲಿ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಿ ಕರ್ನಾಟಕ ಬಂದ್‍ಗೆ ಬೆಂಬಲಿಸಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕರ್ನಾಟಕ ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ 1932 ರಲ್ಲಿ ಆದ ಒಪ್ಪಂದದಂತೆ ಇಂದಿಗೂ ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಯಾವ ನ್ಯಾಯ? ಪ್ರತಿ ವರ್ಷವೂ ಈ ವಿವಾದ ಭುಗಿಲೇಳುತ್ತಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನೀರು ಹಂಚಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಬೆಳಿಗ್ಗೆ ಆರು ಗಂಟೆಗೆ ಗಾಂಧಿವೃತ್ತದಲ್ಲಿ ಜಮಾಯಿಸಿ ನಗರದ ಎಲ್ಲಾ ಕಡೆ ಸುತ್ತಾಡಿ ಬಂದ್‍ಗೆ ಬೆಂಬಲಿಸುವಂತೆ ಜನಸಾಮಾನ್ಯರು ಹಾಗೂ ವ್ಯಾಪಾರ ವಹಿವಾಟುದಾರರಲ್ಲಿ ವಿನಂತಿಸಲಾಗುವುದು. ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂತೆ ಯಾರನ್ನು ಬಲವಂತ ಮಾಡುವುದಿಲ್ಲ. ಕಾವೇರಿ ನೀರು ಇಡಿ ರಾಜ್ಯಕ್ಕೆ ಸಂಬಂಧಿಸಿದ್ದು, ಹಾಗಾಗಿ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್‍ಗೆ ಬೆಂಬಲಿಸಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವಿಶ್ವನಾರಾಯಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸಿ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್‍ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್, ಸಿ.ಪಿ.ಐ. ತಾಲ್ಲೂಕು ಸಹ ಕಾರ್ಯದರ್ಶಿ ಈ.ಸತ್ಯಕೀರ್ತಿ, ಗೋಪಿನಾರಾಯಣಮೂರ್ತಿ, ಸುರೇಶ, ಮಂಜುನಾಥ, ಆರ್.ಪ್ರದೀಪ್, ಸಾಯಿಕುಮಾರ್, ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಜಯಪ್ರಕಾಶ್‍ಗೌಡ, ರೈತ ಮುಖಂಡರುಗಳಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಲಕ್ಷ್ಮಿಕಾಂತ್ ಇವರುಗಳು ಸಭೆಯಲ್ಲಿ ಹಾಜರಿದ್ದರು.