ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.29 : ಕನ್ನಡ ನಾಡಿನ ಜೀವ ನದಿ ಕಾವೇರಿ ನೀರನ್ನು ಪ್ರತಿನಿತ್ಯ ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ವಿವಿಧ ಜನಪರ ಸಂಘಟನೆಗಳು, ಹೋರಾಟಗಾರರು, ರೈತರು ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಪೋಟೋವನ್ನಿಟ್ಟು ಹೂವಿನ ಹಾರ ಹಾಕಿ, ಮದ್ಯ, ಚಿಕನ್, ಮಟನ್, ಸಿಗರೇಟು ಇಟ್ಟು ಪುಣ್ಯತಿಥಿ ಆಚರಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯೇ ಜಮಾವಣೆಯಾದ ಕೆ.ಟಿ.ಶಿವಕುಮಾರ್ ನೇತೃತ್ವದಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರು, ವೈ. ಕುಮಾರ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು, ಜೆ. ಯಾದವರೆಡ್ಡಿ ನೇತೃತ್ವದಲ್ಲಿ ಕರ್ನಾಟಕ ಸರ್ವೋದಯ ಪಕ್ಷ ಸೇರಿದಂತೆ ಹಲವು ರೈತಪರ ಪ್ರತಿಭಟನಾಕಾರರು ತಮಿಳುನಾಡು ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರವಾಸಿಮಂದಿರಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಮತ್ತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದ ನ್ನು ನಿಲ್ಲಿಸಬೇಕು. ನಮ್ಮ ರಾಜ್ಯದಲ್ಲಿ ಮಳೆ ಇಲ್ಲದೆ ನೀರಿನ ಅಭಾವ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಬಂದ್ ಹಿನ್ನಲೆಯಲ್ಲಿ, ಇಂದು(ಸೆ.29) ಬೆಳಗ್ಗೆ 6-00 ಗಂಟೆಯಿಂದ ಸಂಜೆ 6-00 ಗಂಟೆವರೆಗೆ ಸಿ.ಆರ್.ಪಿ.ಸಿ. ಕಲಂ 144 ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಅವರು ಆದೇಶಿಸಿದ್ದರು.
ಮಾರುಕಟ್ಟೆಗಳು, ಅಂಗಡಿಗಳು, ಶೋರೂಮ್‌ಗಳನ್ನು, ಶಾಲೆಗಳು, ಕಾಲೇಜುಗಳು ಅಥವಾ ಕಚೇರಿಗಳನ್ನು
ಬಲವಂತವಾಗಿ ಮುಚ್ಚಿಸುವಂತಿಲ್ಲ. ಸಾರ್ವಜನಿಕ ಸಾರಿಗೆ ಮತ್ತು ವಾಹನಗಳ (ಸರ್ಕಾರಿ ಅಥವಾ ಖಾಸಗಿ) ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಪಡಿಸುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆಸೇಶಿಸಿದ್ದರು.
ಬಂದ್ ಭೀತಿಯಿಂದಲೇ ರಸ್ತೆಗಿಳಿದ ಜನರಿಗೆ ಅಚ್ಚರಿ ಕಾದಿತ್ತು.ಗಾಂಧಿ ವೃತ್ತ ಸೇರಿದಂತೆ ನಗರದೆಲ್ಲೆಡೆ ಬೆಳಗಿನ ಜಾವದಿಂದಲೇ ದ್ವಿಚಕ್ರ ವಾಹನಗಳು, ಆಟೋ ಹಾಗೂ ಕೆಎಸ್ಆರ್ಟಿಸಿ ಬಸ್ಸುಗಳು ಕಾರ್ಯ ನಿರ್ವಹಿಸುತ್ತಿದ್ದವು. ಬೀದಿಬದಿಯ ವ್ಯಾಪಾರಿಗಳು ಮತ್ತು ಕೆಲವು ಅಂಗಡಿ ತೆರೆದಿದ್ದವು ಮತ್ತು ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಕಂಡು ಬಂತು.
ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರವಾದ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪೊಲೀಸ್ ಅಧಿಕಾರಿಗಳು ಮೊಬೈಲ್ ಗಸ್ತು ತಿರುಗುತ್ತಿದ್ದರು.