ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.12) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ.13ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮೇ.13ರಂದು ಬೆಳಿಗ್ಗೆ 6 ಗಂಟೆಯಿಂದ ಮೇ.14ರ ಬೆಳಿಗ್ಗೆ 6 ಗಂಟೆಯವರಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ 1973ರ ಕಲಂ 144 ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ ಹಾಗೂ ಮತ ಎಣಿಕೆ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮೆರವಣಿಗೆ ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗುವುದರಿಂದ ಅಭ್ಯರ್ಥಿಗಳ ಪರ ಹಾಗೂ ವಿರೋಧಿ ಬೆಂಬಲಿಗರು ಸಂಭ್ರಮಿಸುವುದು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳ ಬೆಂಬಲಿಗರೊಂದಿಗೆ ಗಲಭೆ ಸೃಷ್ಠಿ ಮಾಡುವ ಹಾಗೂ ಇತರೆ ಅಹಿತಕರ ಕೃತ್ಯಗಳು ನಡೆಯಬಹುದಾಗಿರುತ್ತದೆ. ಇದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶಿಸಲಾಗಿದೆ.
ಪ್ರತಿಬಂಧಕಾಜ್ಞೆ ಅನ್ವಯ ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಕಲ್ಲುಗಳು ಕ್ಷಾರಪದಾರ್ಥ ಸ್ಪೋಟಕ ವಸ್ತುಗಳನ್ನು ಹಾಗೂ ಮಾರಕಾಸ್ತ್ರಗಳನ್ನು ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಮನುಷ್ಯರಿಗೆ ಅಪಾಯ ಉಂಟು ಮಾಡುವ ಯಾವುದೇ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಅಣುಕು ಶವಗಳ ಪ್ರದರ್ಶನ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿಷೇಧಿಸಲಾಗಿದೆ. ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದಾತ್ಮಕವಾಗಿ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿರುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು, ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಅಂತಹ ಮಾರಾಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ರೀತ್ಯಾ ಕ್ರಮ ಜರುಗಿಸಲಾಗುವುದು.
ಈ ಆದೇಶವು ಅಂತ್ಯಕ್ರಿಯೆ ಮೆರವಣಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ನಡೆಸುವ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ. ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.