2023ರ ವಿಧಾನಸಭಾ ಚುನಾವಣೆಗೆ ದಿನಗಳ ಏಣಿಕೆ ಶುರುವಾಗಿದೆ. ಅಂದಾಜು ಲೆಕ್ಕದಲ್ಲಿ ಇನ್ನೊಂದು ನಾಲ್ಕು ತಿಂಗಳು ಪ್ರಚಾರಕ್ಕೆ ಸಮಯವಿದೆ. ಬಳಿಕ ಚುನವಾಣೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಮೂರು ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಈ ಬಾರಿ ಆಮ್ ಆದ್ಮಿ ಪಕ್ಷ ಕೂಡ ಸೆಡ್ಡು ಹೊಡೆಯಲು ತಯಾರಿ ನಡೆಸಿದೆ. ಇದರ ನಡುವೆ ಈ ಬಾರಿಯ ಚುನಾವಣೆಯಿಂದ ಸತೀಶ್ ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕ ಅವರನ್ನು ರಾಜಕೀಯ ಕಣಕ್ಕೆ ಇಳಿಸುತ್ತಿದ್ದಾರೆ. ಅಪ್ಪ ಹೇಳಿದರೆ ನಾನು ಬರುತ್ತೇನೆ ಎಂದು ಮಗಳು ಪ್ರಿಯಾಂಕ ಕೂಡ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಕೂಡ ಪ್ರಿಯಾಂಕ ರಾಜಕೀಯಕ್ಕೆ ಬರುವುದು ಖಚಿತವೆಂದೇ ತಿಳಿಸಿದ್ದಾರೆ. ಒಂದು ವೇಳೆ ಪ್ರಿಯಾಂಕ ರಾಜಕೀಯಕ್ಕೆ ಎಂಟ್ರಿಯಾದರೆ ತಮ್ಮ ಕ್ಷೇತ್ರವಾದ ಯಮನಕನಮರಡಿಯನ್ನೇ ಸತೀಶ್ ಜಾರಕಿಹೊಳಿ ಅವರು ಬಿಟ್ಟುಕೊಡುತ್ತಾರೆ ಎಂಬ ಮಾತಿದೆ.

ಒಂದು ವೇಳೆ ಯಮನಕನಮರಡಿಯನ್ನು ಪ್ರಿಯಾಂಕಾಗೆ ಬಿಟ್ಟುಕೊಟ್ಟರೆ ಸತೀಶ್ ಜಾರಕಿಹೊಳಿ ನೇರವಾಗಿ ಸವದತ್ತಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಸವದತ್ತಿ ಧಾರ್ಮಿಕ ಕ್ಷೇತ್ರ. ಕಳೆದ ಮೂರು ವರ್ಷದಿಂದ ಇಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯ ಶಾಸಕರಾಗಿದ್ದ ಆನಂದ ಮಾಮನಿ ಮೃತಪಟ್ಟಿದ್ದಾರೆ. ಈಗ ಬಿಜೆಪಿಯಿಂದ ಅಷ್ಟೇ ಸ್ಟ್ರಾಂಗ್ ಕ್ಯಾಂಡಿಡೇಟ್ ರೆಡಿಯಾಗಬೇಕಿದೆ. ಆದರೆ ಬೆಳಗಾವಿ ಜಿಲ್ಲೆಯ ಸಂಸದ ಸ್ಥಾನಕ್ಕಾಗಿ ನಡೆದಿದ್ದ ಉಪಚುನಾವಣೆಯಲ್ಲಿ ಸವದತ್ತಿ ಕ್ಷೇತ್ರದಿಂದಾನೆ ಜಾರಕಿಹೊಳಿಗೆ ಹೆಚ್ಚು ಮತಗಳು ಲಭಿಸಿದ್ದವು. ಹೀಗಾಗಿ ಸವದತ್ತಿಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ. ಈ ಬಾರಿ ಅಲ್ಲಿಂದಾನೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.


