ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನಡೆಗೆ ಇದೀಗ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಹಾರ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಬಿಹಾರಿಗಳಿಗೆ ವೈಯಕ್ತಿಕವಾಗಿ ಮನವಿಯನ್ನ ಮಾಡಿದ್ದರು. ಇದೀಗ ಕೇರಳದ ಚುನಾವಣೆ ಬರ್ತಾ ಇದ್ದು, ಅದರ ಮುತುವರ್ಜಿಯನ್ನು ವಹಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರು ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಹಾರದ ಚುನಾವಣೆ ನಡೆದಿತ್ತು. ಆ ಚುನಾವಣೆಯ ಸಂದರ್ಭದಲ್ಲೂ ಬೆಂಗಳೂರಿನಲ್ಲಿರುವ ಬಿಹಾರಿಗಳನ್ನು ಭೇಟಿ ಮಾಡಿ, ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದ್ದರು. ಇದೀಗ ಕೇರಳದ ಚುನಾವಣೆ ವಿಚಾರಕ್ಕೂ ಅದೇ ಮಂತ್ರ ಪಠಿಸುತ್ತಿದ್ದಾರೆ.
ಚುನಾವಣೆ ಅಂತ ಬಂದಾಗ ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಸಾಕಷ್ಟು ಜವಾಬ್ದಾರಿಗಳನ್ನ ನೀಡುತ್ತದೆ. ಬೇರೆ ಬೇರೆ ರಾಜ್ಯದ ಚುನಾವಣೆಗಳಲ್ಲಿ ಭಾಗುಯಾಗಿ, ಗೆಲುವು ಸಾಧಿಸುವುದಕ್ಕೆ ಮುಂದೆ ನಿಲ್ಲುವಂತ ಸೂಚನೆಯನ್ನು ನೀಡುತ್ತದೆ. ಅದರಂತೆ ಬಿಹಾರ ಚುನಾವಣೆಯ ಬಗ್ಗೆಯೂ ಒಂದಷ್ಟು ಜವಾಬ್ದಾರಿಯನ್ನು ನೀಡಿತ್ತು. ಈಗ ಡಿಸೆಂಬರ್ ನಲ್ಲಿ ಕೇರಳ ರಾಜ್ಯದ ಚುನಾವಣೆ ಬರ್ತಿರೋ ಕಾರಣ, ಅವರಿಗೆ ಜವಾಬ್ದಾರಿ ನೀಡಿದೆ.
ಕೇರಳ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ-2025 ಡಿಸೆಂಬರ್ ರಂದು ನಡೆಯಲಿದೆ. ಕೇರಳ ರಾಜ್ಯದ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ಗಳು ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ಉದ್ಯಮದಾರರು ಕೇರಳ ರಾಜ್ಯದ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಅನುವಾಗುವಂತೆ ಕೇರಳ ರಾಜ್ಯದ ಮತದಾರರಾದವರಿಗೆ ಕನಿಷ್ಟ ಮೂರು ದಿನಗಳ “ವೇತನ ಸಹಿತ ರಜೆ” ಯನ್ನು ನೀಡಲು ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಹಕರಿಸಲು ಕೋರುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬರೆದಿದ್ದಾರೆ.
