Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ರಾಜ್ಯೋತ್ಸವ ವಿಶೇಷ: ಕೋಟೆನಾಡಿನ ಇತಿಹಾಸಕ್ಕೆ ಜೀವ ತುಂಬಿದ ಕನ್ನಡದ ಕಣ್ಮಣಿ! ಎಂದಿಗೂ ಮರೆಯಲಾಗದ ಹುಲ್ಲೂರು ಶ್ರೀನಿವಾಸ ಜೋಯಿಸರು

---Advertisement---

ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ,        ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 05 : ನಾಡಿನ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಮರಿಸುವ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ, ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಇತಿಹಾಸ ಸಂಶೋಧನೆಯ ಮೂಲಕ ಮುಗಿಲೆತ್ತರಕ್ಕೆ ಏರಿಸಿದ ಮಹನೀಯರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ. ಅಂತಹ ಅಪರೂಪದ ಸಾಧಕರಲ್ಲಿ ಚಿತ್ರದುರ್ಗದ ಇತಿಹಾಸವನ್ನು ಜನಮಾನಸದಲ್ಲಿ ಅಚ್ಚೊತ್ತಿಸಿದ ಸಂಶೋಧಕ, ದುರ್ಗದ ಕಣ್ಮಣಿ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಮುಖರಾಗಿದ್ದಾರೆ. ಕೋಟೆ-ಕೊತ್ತಲಗಳ ನಾಡಾದ ಚಿತ್ರದುರ್ಗದ ಇತಿಹಾಸದ ಕಣಕಣವನ್ನೂ ಆಳವಾಗಿ ಶೋಧಿಸಿ, ಕನ್ನಡದ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹಾನ್ ಚೇತನವಿದು.

ಹುಲ್ಲೂರು ಶ್ರೀನಿವಾಸ ಜೋಯಿಸರು ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ 1892ರ ಮಾರ್ಚ್ 29ರಂದು ಜನಿಸಿದರು. ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಅವರು ಆರಂಭದಲ್ಲಿ ಗುಮಾಸ್ತರಾಗಿ, ಬಳಿಕ ಶಾಲಾ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಶಿಕ್ಷಕ ವೃತ್ತಿಯಲ್ಲಿದ್ದಾಗಲೇ ಮೈಸೂರು ಸರ್ಕಾರ ನಡೆಸುತ್ತಿದ್ದ ಫ್ಲೀಡರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಆದರೆ ಅವರ ಅಂತರಾಳದಲ್ಲಿದ್ದ ಜ್ಞಾನದಾಹ ಮತ್ತು ನಾಡಿನ ಬಗೆಗಿನ ಪ್ರೇಮ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ.

ಸ್ವಾತಂತ್ರ್ಯ ಹೋರಾಟದ ಕೆಚ್ಚು

ಕೇವಲ ವಿದ್ವತ್ ಲೋಕಕ್ಕೆ ಸೀಮಿತವಾಗದ ಜೋಯಿಸರು, ದೇಶಾದ್ಯಂತ ವ್ಯಾಪಿಸಿದ್ದ ಸ್ವಾತಂತ್ರ್ಯ ಚಳವಳಿಯಲ್ಲೂ ಮುಂಚೂಣಿಯಲ್ಲಿ ನಿಂತರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯ ಮೇಲೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಧಿಕ್ಕರಿಸಿ ರಾಷ್ಟ್ರಧ್ವಜ ಹಾರಿಸಿ ಧ್ವಜ ಸತ್ಯಾಗ್ರಹ ನಡೆಸಿದರು. ಈ ಕೆಚ್ಚೆದೆಯ ಹೋರಾಟಕ್ಕಾಗಿ ಬಂಧನಕ್ಕೊಳಗಾದ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕಠಿಣ ಸೆರೆಮನೆ ವಾಸ ಅನುಭವಿಸಿದರು. ಸ್ವಾತಂತ್ರ್ಯಾನಂತರ ನಡೆದ ಐತಿಹಾಸಿಕ ಮೈಸೂರು ಚಲೋ ಚಳವಳಿಯಲ್ಲೂ ಮುಂಚೂಣಿಯಲ್ಲಿ ಭಾಗವಹಿಸಿ ನಾಡಿಗಾಗಿ ಜೈಲು ಸೇರಿದ್ದರು.

ಇತಿಹಾಸ ಸಂಶೋಧನೆಯ ಮಹಾಯಾತ್ರೆ

ಬಾಲ್ಯದಿಂದಲೇ ಅಪಾರ ಓದಿನ ಹಸಿವನ್ನು ಹೊಂದಿದ್ದ ಜೋಯಿಸರಿಗೆ ಡಾ. ಪಿ. ಕೃಷ್ಣರಾವ್ ಅವರು ಚಿತ್ರದುರ್ಗದ ಕುರಿತು ಬರೆದಿದ್ದ ಲೇಖನಗಳು ತೀವ್ರ ಪ್ರಭಾವ ಬೀರಿದವು. ಮುಂದೆ ಅವರು ತಮ್ಮ ಇಡೀ ಜೀವನದ ಉತ್ತರಾರ್ಧವನ್ನು ಚಿತ್ರದುರ್ಗ ಹಾಗೂ ಕರ್ನಾಟಕದ ಇತಿಹಾಸ ಸಂಶೋಧನೆಗಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡರು. 1922ರಿಂದ 1956ರ ಅವಧಿಯಲ್ಲಿ ಅವರು ಚಿತ್ರದುರ್ಗ ಮತ್ತು ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಇನ್ನೂರಕ್ಕೂ ಹೆಚ್ಚು ಐತಿಹಾಸಿಕ ಲೇಖನಗಳನ್ನು ಹಾಗೂ ಹತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದರು. ಸ್ಥಳೀಯ ಇತಿಹಾಸವನ್ನು ತಿಳಿದುಕೊಳ್ಳಲು ದುರ್ಗಕ್ಕೆ ಬರುತ್ತಿದ್ದ ಸಂಶೋಧಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅವರು ಸದಾ ಮಾರ್ಗದರ್ಶಕರಾಗಿ ನಿಲ್ಲುತ್ತಿದ್ದರು.

ಅಪರೂಪದ ಸಾಹಿತ್ಯ ಕೊಡುಗೆ

ಚಿತ್ರದುರ್ಗದ ಬಖೈರು (ದಾಖಲೆ ಗ್ರಂಥ) ಸಂಶೋಧನಾ ಕೃತಿ ಹಿರೇಮದಕರಿ ನಾಯಕರ ತಾರಾವಳಿ (ವಂಶವೃಕ್ಷ), ಚಿತ್ರದುರ್ಗದ ಪತನವನ್ನು ತಿಳಿಸುವ ಕೋಲಾಟ ಪದಗಳು, ಟಿಪ್ಪುಸುಲ್ತಾನನು ದುರ್ಗದ ಪಾಳೆಯಗಾರರೊಂದಿಗೆ ಕಾದಾಟ ಮಾಡಿದ ಬಗ್ಗೆ ಜಗಳದ ಪದಗಳನ್ನು ಸಂಗ್ರಹಿಸಿದ್ದಾರೆ. ನಾಡಕಥೆಗಳು, ತಪೋ ಸಾಂಗತ್ಯ, ಮಾರ ಭೂಪಾಲ, ಮಯೂರಶರ್ಮ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ. ರಣ-ಮೂರ್ಖ ಕುಲ, ಉಚ್ಚಂಗಿ ದುರ್ಗದ ಪಾಂಡ್ಯರು, ಪೂವಲಿ ಅರಸರು ಮೊದಲಾದವರ ಬಗ್ಗೆ ಉತ್ತಮ ಸಂಶೋಧನೆ ನಡೆಸಿ. ಐತಿಹಾಸಿಕ ವಿಚಾರಗಳ ಬಗ್ಗೆ ತಮ್ಮ ಕಾಣಿಕೆಯನ್ನು ಸಾಹಿತ್ಯ ರಂಗಕ್ಕೆ ಅರ್ಪಿಸಿದರು. ಕುಮಾರರಾಮನ ಮೇಲೆ ಗಂಡುಗಲಿ ರಾಮ ಎಂಬ ಉದ್ಗ್ರಂಥವೊಂದನ್ನು ರಚಿಸಿದ್ದಾರೆ.
ಸಂದ ಗೌರವಗಳು

ಚಿತ್ರದುರ್ಗದ ಪುರಾಣ ಮತ್ತು ಇತಿಹಾಸ ಕಾಲದ ಅಳಿದುಳಿದ ಪಳೆಯುಳಿಕೆಗಳನ್ನು, ಶಾಸನ ಹಾಗೂ ಸ್ಮಾರಕಗಳನ್ನು ಸ್ವತಃ ಶ್ರಮವಹಿಸಿ ಕಲೆಹಾಕಿದ ಜೋಯಿಸರು, ನಗರದ ರಂಗಯ್ಯನಬಾಗಿಲ ಬಳಿ ಒಂದು ಅಪರೂಪದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದರು. ಈ ಮ್ಯೂಸಿಯಂ ಇಂದಿಗೂ ಇತಿಹಾಸ ಪ್ರಿಯರಿಗೆ ಅಧ್ಯಯನದ ಕೇಂದ್ರವಾಗಿದೆ. ಇವರ ಅಪ್ರತಿಮ ಸಂಶೋಧನಾ ಶ್ರಮವನ್ನು ಗುರುತಿಸಿದ ಸಿರಿಗೆರೆಯ ತರಳಬಾಳು ಜಗದ್ಗುರುಗಳು 1949ರಲ್ಲಿ ‘ಐತಿಹ್ಯ ವಿಮರ್ಶನ ವಿಚಕ್ಷಣ’ ಹಾಗೂ ‘ಇತಿಹಾಸ ಸಂಶೋಧನ ಪ್ರಸಕ್ತ’ ಎಂಬ ಮಹೋನ್ನತ ಬಿರುದುಗಳನ್ನು ನೀಡಿ ಗೌರವಿಸಿದರು.
ಚಿತ್ರದುರ್ಗ ಜಿಲ್ಲೆ ಮತ್ತು ಚಿತ್ರದುರ್ಗದ ಪಾಳೆಯಗಾರರ ಇತಿಹಾಸ ಕುರಿತಂತೆ ಜೋಯಿಸರು ಮಾಡಿರುವ ಸಂಶೋಧನೆ ಮತ್ತು ಬರೆದಿರುವ ಲೇಖನಗಳು ಉಲ್ಲೇಖನೀಯವಾದವು. ಚಿತ್ರದುರ್ಗದ ಬಖೈರು ಎಂಬುದು ಅವರು ಸಂಪಾದಿಸಿರುವ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿನಾಯಕನ ಇತಿಹಾಸ ಕುರಿತ ಒಂದು ಪ್ರಮುಖ ಆಕರ ಗ್ರಂಥ. ಭರಮಣ್ಣನಾಯಕನ ಇತಿಹಾಸ ಕುರಿತ ಒಂದು ಪ್ರಮುಖ ಆಕರ ಗ್ರಂಥ. ಭರಮಣ್ಣನಾಯಕನ ಸಮರವಿಜಯ, ಹಿರೇಮದಕರಿನಾಯಕನ ತಾರಾವಳಿ, ಮದಕರಿ ರಾಜೇಂದ್ರ ದಂಡಕ ಮುಂತಾದ ಚಿತ್ರದುರ್ಗ ಪಾಳೆಯಗಾರರ ಇತಿಹಾಸಕ್ಕೆ ನೆರವಾಗುವ ಕವಿಕೃತಿಗಳನ್ನು, ಜನಪದಗೀತೆಯನ್ನೂ ಸಂಪಾದಿಸಿ ಪ್ರಕಟಿಸಿದ್ದಾರೆ. ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಸಿರಿಗೆರೆಯ ತರಳಬಾಳು ಬೃಹನ್ಮಠ ಇವುಗಳ ಇತಿಹಾಸ, ಇವುಗಳಿಗೆ ಸಂಬಂಧಿಸಿದ ಸಾಹಿತ್ಯಕೃತಿಗಳ ಬಗೆಗೆ ವಿವರವಾಗಿ ಬರೆದಿದ್ದಾರೆ, ಸ್ಥಳನಾಮ ಅಧ್ಯಯನ ಈಚಿನ ಕಾಲದಲ್ಲಿ ಒಂದು ಪ್ರಮುಖ ಅಧ್ಯಯನ ಶಾಖೆಯಾಗಿ ಬೆಳೆದಿದೆಯಾದರೂ ಹಿಂದೆ ಆ ಬಗ್ಗೆ ಏನೂ ಇಲ್ಲದಿದ್ದ ಕಾಲದಲ್ಲಿ ಅವರು ಅನೇಕ ಲೇಖನಗಳನ್ನು ಬರೆದಿರುವುದು ಸ್ಥಳನಾಮ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯಾಗಿದೆ.

ಕನ್ನಡ ಮನಗಳಲ್ಲಿ ಅಚ್ಚಳಿಯದ ನೆನಪು

ಕಷ್ಟ-ಕಾರ್ಪಣ್ಯಗಳಿಗೆ ಎಂದೂ ಎದೆಗುಂದದೆ, ಸದಾ ಆತ್ಮವಿಶ್ವಾಸದಿಂದ ಇತಿಹಾಸದ ಕಾಯಕದಲ್ಲೇ ಬದುಕನ್ನು ಸವೆಸಿದ ಹುಲ್ಲೂರು ಶ್ರೀನಿವಾಸ ಜೋಯಿಸರು 1956ರ ನವೆಂಬರ್ 8ರಂದು ಇಹಲೋಕ ತ್ಯಜಿಸಿದರು. ಭೌತಿಕವಾಗಿ ಅವರು ನಮ್ಮನ್ನಗಲಿದ್ದರೂ, ಅವರು ನಾಡಿಗೆ ನೀಡಿದ ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಗಳು ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿವೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಯುಗಪುರುಷನ ಸಾಹಿತ್ಯಿಕ ಮತ್ತು ಐತಿಹಾಸಿಕ ತಪಸ್ಸನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ