ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆಗೆ ಕರ್ನಾಟಕದಲ್ಲಿ ಎಲ್ಲರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಮೊದಲು ರಾಯಣ್ಣ ಪ್ರತಿಮೆ ಧ್ವಂಸ ಮಾಡಿದವರಿಗೆ ಶಿಕ್ಷೆಯಾಗಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಕಹಳೆ ಮೊಳಗಿದೆ. ಬೆಳಗಾವಿ ಚಲೋಗೆ ಚಾಲನೆ ಸಿಕ್ಕಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಸಂಗೊಳ್ಳಿ ರಾಯಣ್ಣ ದೇಶಕ್ಕೆ ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಸಂಗೋಳಿ ರಾಯಣ್ಣ ಪ್ರತಿಮೆ ಹೊಡೆದು
ಎಂಇಎಸ್, ಶಿವಸೇನೆ ಗುಂಡಾಗಿರಿ ಮಾಡಿದ್ದಾರೆ. ಅಧಿವೇಶನದಲ್ಲಿ ಎಂಇಎಸ್ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.
ಈ ಬಗ್ಗೆ ಯಾರು ಚಕಾರ ಎತ್ತಬಾರದು. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ. ಕನ್ನಡ ಪರ ಸಂಘಟನೆಗಳ ಮುಖಂಡರು ತೀರ್ಮಾನ ಮಾಡಿಯಾಗಿದೆ. ಈ ಸಂಬಂಧ ಹೋರಾಟವನ್ನ ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದೆ. ನಾಳೆ ಸಂಜೆ ಒಳಗೆ ಎಂಇಎಸ್ ನಿಷೇಧಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡ್ತೇವೆ. ಶಿವಸೇನೆ ಕರ್ನಾಟಕದ ಒಳಗೆ ಕಾಲಿಡಬಾರದು. ಶಿವಸೇನೆ ಪುಂಡಾಟೀಕೆ ನಿಲ್ಲಬೇಕು. ಬಸ್ಸುಗಳಿಗೆ ಎಂಇಎಸ್ ಕಾರ್ಯಕರ್ತರು ಹಾನಿ ಮಾಡಿದ್ದಾರೆ. ಎಲ್ಲಾ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬೆಳಗಾವಿ ಗೆ ಹೋಗುವಂತೆ ವಾಟಾಳ್ ಕರೆ ನೀಡಿದ್ದಾರೆ.
ಈ ಸಂಬಂಧ ಬುಧವಾರ ಸಂಜೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಸಭೆ ಕರೆದಿದ್ದು, ಅಂದು ಹೋರಾಟದ ಕುರಿತು ರೂಪುರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.