ಸುದ್ದಿಒನ್, ಚಿತ್ರದುರ್ಗ, (ಅ.31) : ವಿಶ್ವದ ಪ್ರಚಲಿತ 21 ಭಾಷೆಗಳಲ್ಲಿ ಕನ್ನಡ ಭಾಷೆಗೂ ಪ್ರಥಮ ಆದ್ಯತೆ ಇದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕನ್ನಡ ಅಭಿವೃದ್ದಿ ಪ್ರಾಧಿಕಾರಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಕನ್ನಡ ಕಾಯಕ ವರ್ಷ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಟಿ ಕವನ ವಾಚನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಸದಾ ಜನಮುಖಿಯಾಗಿ ಪೋಷಣೆ ಆಗಬೇಕು. ಸಾಹಿತ್ಯ ಕೃಷಿಯ ಮೂಲಕ ಭಾಷೆಯ ಬೆಳವಣಿಗೆಗೆ ಬರಹಗಾರರ ಜವಾಬ್ದಾರಿ ಅಪಾರವಾಗಿದೆ ಎಂದು ಹೇಳಿದರು.
ನ್ಯಾಯವಾದಿ, ಸಾಹಿತಿ ಡಾ. ರೇವಣ್ಣ ಬಳ್ಳಾರಿಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಕನ್ನಡ ಭಾಷೆಗೆ ಸಾರ್ವತ್ರಿಕ ಬೆಳವಣಿಗೆಯ ಶಕ್ತಿ ಇದೆ. ನಾಡಿನ ಭಾಷೆ ಮತ್ತು ಸಂಸ್ಕøತಿಯ ಪೋಷಣೆಯಲ್ಲಿ ಪ್ರತಿಯೊಬ್ಬರ ಕರ್ತವ್ಯ ಇದೆ ಎಂದು ಹೇಳಿದರು.
ಕವಿತಾ ವಾಚನ ಮಾಡಿದ 30 ಕವಿಗಳ ಕವಿತೆಗಳ ವಿಶ್ಲೇಷಣೆ ಮಾಡಿ ಸಮಾಜದ ವಾಸ್ತವ ಸಂಗತಿಗಳಿಗೆ ಅಕ್ಷರ ರೂಪ ಕೊಡುವ ಕೆಲಸ ಆಗಬೇಕು. ಪುನೀತ್ ರಾಜ್‍ಕುಮಾರ್ ಅವರ ಬದುಕು ಸಮಾಜಕ್ಕೆ ಒಂದು ನೆನಪಾಗಿ ಉಳಿದುಕೊಂಡಿರುವ ಕುರಿತಾಗಿ ಹೆಚ್ಚು ಕವಿತೆಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಾಹಿತ್ಯ ಪ್ರಕಾರದಲ್ಲಿ ಕಾವ್ಯ ಬರಹಕ್ಕೆ ಮಹತ್ವ ಶಕ್ತಿ ಇದೆ. ಪ್ರಸ್ತುತ ಸಮಾಜದಲ್ಲೂ ಕಾವ್ಯವನ್ನು ಓದುವ ಮತ್ತು ವಿಶ್ಲೇಷಣೆ ಮಾಡುವ ಶಕ್ತಿ ಕಾಣುತ್ತೇವೆ. ಜನ-ಮನ ಮಾತಾಗುವ ರೀತಿಯಲ್ಲಿ ವಾಸ್ತವ ಘಟನೆಗಳಿಗೆ ಕಾವ್ಯ ರಚನೆ ಆಗಬೇಕು.
ಸಮಾಜಮುಖಿ ಬರಹ ಮಾತ್ರ ಸಮಾಜದಲ್ಲಿ ಜೀವಂತಿಕೆ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯೆ ದಯಾಪುತ್ತೂರ್ಕರ್ ಮಾತನಾಡಿ, ಸಾಹಿತ್ಯ ಕಾರ್ಯಕ್ರಮಗಳ ಬೆಳವಣಿಗೆಗೆ ಪ್ರೋತ್ಸಾಹಿಸುವ ಮನಸ್ಸುಗಳು ಬೇಕು. ಪ್ರತಿಭಾವಂತ ಬರಹಗಾರರನ್ನು ಸಮಾಜದ ಮುಖ್ಯವಾಹಿನಿಗೆ ಗುರುತಿಸುವ ಕೆಲಸ ಕನ್ನಡಪರ ಸಂಘಟನೆಗಳ ಕರ್ತವ್ಯ ಆಗಬೇಕು ಎಂದು ಹೇಳಿದರು.
ಡಾ.ರಾಜ್‍ಕುಮಾರ್ ಕನ್ನಡ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಪರಶುರಾಮ್ ಗೊರಪ್ಪರ್, ಉಪನ್ಯಾಸಕಿ ಸುಮನಾ ಎಸ್. ಅಂಗಡಿ, ಶೋಭಾಮಲ್ಲಿಕಾರ್ಜುನ, ಯಾದಲಗಟ್ಟೆ ಜಗನ್ನಾಥ, ದೊಡ್ಡಉಳ್ಳಾರ್ತಿ ಗೌರೀಶ, ಕಲ್ಲೇಶ್‍ಮೌರ್ಯ, ಎಚ್. ಲಂಕಪ್ಪ, ಪಂಡರಹಳ್ಳಿ ಶಿವರುದ್ರಪ್ಪ ಮತ್ತಿತರರು ಇದ್ದರು.
ಕವಿಗೋಷ್ಟಿಯಲ್ಲಿ ರೇಣುಕಾಪ್ರಕಾಶ್, ನಿರ್ಮಲ ಭಾರಧ್ವಜ್, ಮೀರಾನಾಡಿಗ್, ನಿರ್ಮಲ ಮಂಜುನಾಥ್, ಜಿ.ಎನ್.ಗೊಂದಾಳಪ್ಪ, ಹಾಸ್ಯಕವಿ ಜಗನ್ನಾಥ, ಶೋಭಾ, ಉಮೇಶ್‍ಕೊಂಡ್ಲಹಳ್ಳಿ, ದುರ್ಗಾವರ ತಿಪ್ಪೇಸ್ವಾಮಿ, ಜಯದೇವಮೂರ್ತಿ, ಜಯಪ್ರಕಾಶ್, ಭಾಗ್ಯ ಗಿರೀಶ್, ರೆಹಮತ್‍ಉನ್ನಿಸಾ, ಚಂದ್ರಶೇಖರ ಗುಂಡೇರಿ, ಸಿ.ಟಿ. ನಿರ್ಮಲಾ, ರವಿನಾಗ್ ತಾಳ್ಯ, ಅಕ್ಷತಾ.ಕೆ, ಡಾ.ಶಫೀವುಲ್ಲಾ, ಮತ್ತಿತರರು ಕವಿತೆ ವಾಚನ ಮಾಡಿದರು.